ಮಂಗಳೂರು: ಕೊರೊನಾ ಬಾಧಿತನಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದ ಮಂಗಳೂರಿನ ವಿದ್ಯಾರ್ಥಿ ಚಿರಾಗ್ ಎಸ್. ರಾವ್ ಬಿಎಸ್ಸಿ ಕೃಷಿ ವಿಭಾಗದಲ್ಲಿ 28ನೇ ಸ್ಥಾನ ಗಳಿಸಿದ್ದಾರೆ.
ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆದಿರುವ ಸಿಇಟಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಚಿರಾಗ್ ಎಸ್. ರಾವ್ ಬಿಎಸ್ಸಿ ಕೃಷಿ ವಿಭಾಗವಲ್ಲದೆ ಬಿಎಸ್ಸಿ ಪಶುವಿಜ್ಞಾನದಲ್ಲಿ 29ನೇ ರ‍್ಯಾಂಕ್, ಬಿ ಫಾರ್ಮಾ/ ಡಿ ಫಾರ್ಮಾ ವಿಭಾಗದಲ್ಲಿ 46ನೇ ರ‍್ಯಾಂಕ್ ಯೋಗ ವಿಜ್ಞಾನ ಮತ್ತು ನ್ಯಾಚುರೋಪಥಿಯಲ್ಲಿ 32ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 214ನೇ ಸ್ಥಾನಗಳಿಸಿದ್ದಾರೆ.
ನಗರದ ಚೈತನ್ಯ ಪಿಯು ಕಾಲೇಜು ವಿದ್ಯಾರ್ಥಿಯಾಗಿರುವ ಚಿರಾಗ್ ಎಸ್.ರಾವ್ ಅವರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ಒಂದು ವಾರದ ಹಿಂದೆ ಕೊರೊನಾ ಸೋಂಕು ದೃಢಗೊಂಡಿತ್ತು. ಆದರೆ ಯಾವುದೇ ರೋಗಲಕ್ಷಣಗಳಿರಲಿಲ್ಲ. ಸೋಂಕು ಇರುವ ಕಾರಣ ಜಿಲ್ಲಾಧಿಕಾರಿ ಕಚೇರಿಯಿಂದ ಬರುತ್ತಿರುವ ವಿಶೇಷ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುತ್ತಿದ್ದರು. ಸೋಂಕಿತರಿಗಾಗಿಯೇ ಸುರತ್ಕಲ್ನಲ್ಲಿರುವ ಎನ್ಐಟಿಕೆಯಲ್ಲಿ ತೆರೆಯಲಾಗಿರುವ ವಿಶೇಷ ಪರೀಕ್ಷಾ ಕೇಂದ್ರದಲ್ಲಿ ಚಿರಾಗ್ ಪರೀಕ್ಷೆ ಬರೆದಿದ್ದಾರೆ. ಚಿರಾಗ್ ಹೇಳುವಂತೆ ಸೋಂಕು ತಗುಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಇವರೊಬ್ಬರೇ ಆಗಿದ್ದಾರೆ.
ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಚಿರಾಗ್ ಎಸ್.ರಾವ್ ಉತ್ಸುಕರಾಗಿದ್ದು, ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ಬರೆದು ಅದರ ಅಂಕವನ್ನು ಗಮನಿಸಿ ಮೆಡಿಕಲ್ ಅಥವಾ ಇಂಜಿನಿಯರಿಂಗ್ ವಿಭಾಗವನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.