ಮಂಗಳೂರು: ನಗರದಲ್ಲಿ ವಿವಾದಿತ ಗೋಡೆ ಬರಹ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22), ಮಾಝ್ ಮುನೀರ್ ಅಹಮ್ಮದ್ (21) ಬಂಧಿತ ಆರೋಪಿಗಳು. ಪ್ರಚಾರ ಪಡೆಯುವ ಉದ್ದೇಶದಿಂದ ವಿವಾದಿತ ಪ್ರಚೋದನಕಾರಿ ಗೋಡೆ ಬರಹವನ್ನು ಬರೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ವಶಕ್ಕೆ ಪಡೆಯಲಾಗುತ್ತದೆ. ಆ ಬಳಿಕ ಮತ್ತೆ ತನಿಖೆ ನಡೆಸಲಾಗುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಈ ಇಬ್ಬರು ಮಾತ್ರ ಈ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂದೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತದೆ ಎಂದರು.
ಮುಹಮ್ಮದ್ ಶಾರೀಕ್ ತೀರ್ಥಹಳ್ಳಿಯಲ್ಲಿರುವ ತನ್ನ ತಂದೆಯ ಬಟ್ಟೆ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮಾಝ್ ಮುನೀರ್ ಅಹಮ್ಮದ್ ಮಂಗಳೂರಿನ ಕಾಲೇಜೊಂದರಲ್ಲಿ ಬಿಟೆಕ್ ಮೂರನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಜೊಮ್ಯಾಟೊ ಫುಡ್ ಡೆಲಿವರಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ.
ಮುಹಮ್ಮದ್ ಶಾರೀಕ್ ಹಾಗೂ ಮಾಝ್ ಮುನೀರ್ ಅಹಮ್ಮದ್ ಇಬ್ಬರೂ ಪರಿಚಿತರಾಗಿರುವುದರಿಂದ ಮಂಗಳೂರಿಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಪ್ರಚಾರ ದೊರಕಬೇಕೆಂಬ ಉದ್ದೇಶದಿಂದ ಇಬ್ಬರೂ ಈ ಕೃತ್ಯದಲ್ಲಿ ತೊಡಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇದಲ್ಲದೇ ಈ ಕೃತ್ಯದ ಹಿಂದೆ ಇನ್ನೇನಾದರೂ ಉದ್ದೇಶವಿದೆಯೇ ಎಂಬುದರ ಬಗ್ಗೆ ಕೂಲಂಕಷವಾಗಿ ಮುಂದಿನ ಹಂತದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.