ಪುತ್ತೂರು: ಅಚ್ಚೇ ದಿನ್ ಕೊಡುತ್ತೇವೆ ಎಂದು ಹೇಳುತ್ತಾ ಅಧಿಕಾರ ಪಡೆದ ಮೋದಿಯವರು ಇದೀಗ ಜನರಿಗೆ ಸಂಕಷ್ಟಗಳನ್ನು ನೀಡುತ್ತಲೇ ಅಚ್ಚೇ ದಿನ್ ತೋರಿಸುತ್ತಿದ್ದಾರೆ. ಮನ್ ಕೀ ಬಾತ್ ನೀಡುತ್ತಿರುವ ಪ್ರಧಾನಿಗಳು ಬಾತ್ ಬಂದ್ ಮಾಡಿ ಜನರಿಗೆ ಸಹಾಯ ಮಾಡಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಬುಧವಾರ ಪುತ್ತೂರು ಪೇಟೆಯಲ್ಲಿ ನಡೆದ ಸೈಕಲ್ ಜಾಥಾವನ್ನು ನೆಹರೂ ನಗರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲಾ ಪೆಟ್ರೋಲ್ ಡೀಸೆಲ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಬೆಲೆ ಏರಿದಾಗ ಪ್ರತಿಭಟನೆ ನಡೆಸುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಂಜೀವ ಮಠಂದೂರು ಈಗ ಎಲ್ಲಿ ಹೋಗಿದ್ದಾರೆ?. ಅಭಿವೃದ್ಧಿ ಕೆಲಸಕ್ಕಾಗ ದರ ಏರಿಕೆ ಮಾಡಿರುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ಪೆದ್ದುತನದ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಕಷ್ಟಕ್ಕೊಡ್ಡಿ ಇವರು ಮಾಡುವ ಅಭಿವೃದ್ಧಿಯಾದರೂ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದರು.
ಪ್ರಧಾನಿಯವರು ಇಡೀ ದೇಶದ ಸಂಪತ್ತನ್ನು ಅಂಬಾನಿ ಮತ್ತು ಅದಾನಿಯ ಕೈಗಿತ್ತಿದ್ದಾರೆ. ಇಡೀ ದೇಶ ಮೋದಿ, ಅಮಿತ್ ಶಾ, ಅಂಬಾನಿ ಮತ್ತು ಅದಾನಿಗಳ ಕೈಯಲ್ಲಿದೆ. ಇವರ ಕಪಿಮುಷ್ಟಿಯಿಂದ ದೇಶ ಹೊರ ಬರುವಂತಾಗಲು ಸಂಘಟಿತ ಪ್ರಯತ್ನಗಳು ನಡೆಯಬೇಕು. ದೇಶದಲ್ಲಿ ಪೆಟ್ರೋಲ್ ಬೆಲೆ 60 ರೂ. ಮತ್ತು ಡೀಸೆಲ್ ಬೆಲೆ 50 ರೂ.ಗೆ ಬರುವತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ದರ್ಬೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಯುವಕ ಕಾಂಗ್ರೆಸ್ ರಾಜ್ಯ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪ್ಪಾಡ್ ಅವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಹೊರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ದಿನಬಳಕೆ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ದರ ಇಳಿಕೆಯಾಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಕಾಂಗ್ರೆಸ್ ದೇಶದಲ್ಲಿ ಸಂವಿಧಾನವನ್ನು ಉಳಿಸುವ ಹೋರಾಟ ನಡೆಸಿದರೆ ಬಿಜೆಪಿ ತನ್ನ ಜನ ವಿರೋಧಿ ನೀತಿಗಳ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂದರು.
ಸೈಕಲ್ ಜಾಥಾವು ನೆಹರೂ ನಗರದಿಂದ ಆರಂಭಗೊಂಡು ಪುತ್ತೂರು ಮುಖ್ಯರಸ್ತೆಯಲ್ಲಿ ಸಂಚರಿಸಿ ದರ್ಬೆಯಲ್ಲಿ ಕೊನೆಗೊಂಡಿತು.