ಮಂಗಳೂರು (ದಕ್ಷಿಣ ಕನ್ನಡ) : ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿ ವಿತರಣೆ ವಿಚಾರದಲ್ಲಿ ಕುತಂತ್ರ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿಗೆ ಇವರು ಘೋಷಣೆ ಮಾಡಿರುವಂತೆ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಯಂತೆ ಜನರಿಗೆ ಜನರಿಗೆ ಅಕ್ಕಿ ಕೊಟ್ಟಿಲ್ಲ. ಮತ್ತೊಂದೆಡೆ ಅಕ್ಕಿಯನ್ನು ಖರೀದಿ ಮಾಡಿಯೂ ಕೊಟ್ಟಿಲ್ಲ. ಇದರ ವಿರುದ್ದ ಬಿಜೆಪಿ ಇಂದು (ಮಂಗಳವಾರ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. 2 ಲಕ್ಷ ಟನ್ ಅಕ್ಕಿ ಬೇಕು ಎನ್ನುವ ಬೇಡಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗಾಗಲಿ ಅಥವಾ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಜೊತೆಯಾಗಲಿ ಕಾಂಗ್ರೆಸ್ ನಾಯಕರು ಮಾತಾಡಿಲ್ಲ.
ವಿನಾಕಾರಣ ಕಾಂಗ್ರೆಸ್ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅಂದಾಜು ದೇಶದ 84 ಕೋಟಿ ಜನರಿಗೆ 10 ಕೆಜಿ ಅಕ್ಕಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಕಳೆದ 9 ವರ್ಷದಿಂದ 5 ಕೆಜಿ ಅಕ್ಕಿಯನ್ನು ಕೇಂದ್ರ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಅಕ್ಕಿ ರಾಜಕಾರಣ ತರುವ ಪ್ರಯತ್ನ ಮಾಡುತ್ತಿದೆ ಎಂದರು.
ಇದನ್ನೂ ಓದಿ : 15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ
ಜನರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ ಎನ್ನುವ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡಿತ್ತು. ಈ 10 ಕೆಜಿ ಅಕ್ಕಿಯನ್ನು ಯಾರನ್ನು ನಂಬಿ ಹೇಳಿದ್ದೀರಿ? ಚುನಾವಣೆ ಬಳಿಕ ಅಧಿಕಾರಕ್ಕೇರಿ ಇದೀಗ ಗ್ಯಾರೆಂಟಿಗಳಿಗೆ ಮಾರ್ಗಸೂಚಿಗಳನ್ನು ತರುತ್ತಿದ್ದೀರಿ. ಅನುಭವಿ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ಗೆ ನೈತಿಕತೆ, ಮಾನ ಮರ್ಯಾದೆ ಇದ್ದರೆ, ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಬೇಕು. ಜನರಿಗೆ ವಂಚನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ವಿದ್ಯುತ್ ಬಿಲ್ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತು ಉದ್ಯಮಗಳಿಗೆ ಭಾರಿ ಹೊಡೆತ ನೀಡಿದೆ. ಉದ್ಯಮಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಳೀನ್ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅರಾಜಕತೆ ತರಲಿದೆ. ಆರ್ಥಿಕ ಕುಸಿತದಿಂದ ರಾಜ್ಯವನ್ನು ಶ್ರೀಲಂಕಾ, ಪಾಕಿಸ್ತಾನದ ಸ್ಥಿತಿಗೆ ಸಿದ್ದರಾಮಯ್ಯ ತಂದು ನಿಲ್ಲಿಸಲಿದ್ದಾರೆ ಎಂದು ಎಂದು ಟೀಕಿಸಿದರು.
ಇದನ್ನೂ ಓದಿ : ಹೆಂಡತಿಗೆ ಫ್ರೀ ಕೊಟ್ಟು ಗಂಡನ ಕಿಸೆಯಿಂದ ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ