ಮಂಗಳೂರು: ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಲು ಕಾಂಗ್ರೆಸ್ ನೇರ ಕಾರಣ. ಆಗ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಂಗ್ರೆಸ್ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳೆ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಪಂಪ್ವೆಲ್ ಮೇಲ್ಸೇತುವೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನವಯುಗ ಕಂಪೆನಿಯೊಂದಿಗೆ 2009ರಲ್ಲಿ ಒಪ್ಪಂದ ಮಾಡಿಕೊಂಡಿರುವ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ದೂರಿದರು.
ಪಂಪ್ವೆಲ್ ಕಾಮಗಾರಿ ಪ್ರಾರಂಭವಾಗಿ 10 ವರ್ಷವಾಗಿಲ್ಲ. ಸರ್ಕಾರಿ ಅಂಶದ ಪ್ರಕಾರ 2016 ನವೆಂಬರ್ ತಿಂಗಳಲ್ಲಿ ಪಂಪ್ವೆಲ್ ಕಾಮಗಾರಿಗಾಗಿ ಅಲ್ಲಿರುವ ಕಳಶವನ್ನು ತೆಗೆಯಲಾಯಿತು. 2017ರಲ್ಲಿ ಕಾಮಗಾರಿ ಪ್ರಾರಂಭವಾಯಿತು. ಇದೀಗ ಕಾಮಗಾರಿ 2 ವರ್ಷಗಳಲ್ಲಿ ಮುಗಿದಿದೆ. ಕೇಂದ್ರ ಸರ್ಕಾರ ಗುತ್ತಿಗೆ ನೀಡಿರುವ ಕಂಪೆನಿಗೆ ಅಂತಿಮ ದಿನಕ್ಕಿಂತ ಆರು ತಿಂಗಳು ಮೊದಲೇ ಈ ಕಾಮಗಾರಿಯನ್ನು ಬಿಟ್ಟುಕೊಡಲಾಗಿದೆ. ಇದಕ್ಕೆ ನನ್ನಲ್ಲಿ ದಾಖಲೆ ಇದೆ ಎಂದರು.
ಅಭಿವೃದ್ಧಿಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದವರು ಇಂದು ಬರಬೇಕಿತ್ತು. ಆದರೆ ಯಾರೂ ಬಂದಿಲ್ಲ. ಇವರದ್ದೇ ಸರ್ಕಾರ ಇರುವಾಗ ಪಂಪ್ವೆಲ್ ಸೇತುವೆ ಕಾಮಗಾರಿ ವೇಗ ಮಾಡಲು ಯಾಕೆ ಇವರು ಮುತುರ್ವಜಿ ವಹಿಸಿಲ್ಲ. ಈಗ ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ. ಇದು ಸತ್ಯಶೋಧನಾ ಸಮಿತಿಯಲ್ಲ. ಸತ್ತ ಶೋಧನಾ ಸಮಿತಿ ಎಂದು ಹರಿಹಾಯ್ದರು.
ಪಂಪ್ವೆಲ್ ಸೇತುವೆ ವಿಳಂಬ ಕಾಮಗಾರಿ ಬಗ್ಗೆ ಸಾಕಷ್ಟು ಟ್ರೋಲ್ ಆಗಿದೆ. ಆದರೆ ಟ್ರೋಲ್ ಆಗಿರುವುದಕ್ಕೆ ಕಾಮಗಾರಿ ನಡೆಸಿಲ್ಲ. ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ. ನಾವು ಅಭಿವೃದ್ಧಿ ನಡೆಸಬೇಕೆಂದೇ ರಾಜಕೀಯಕ್ಕೆ ಇಳಿದವರು. ಪಂಪ್ವೆಲ್ ಸೇತುವೆ ತಡವಾಗಿಯಾದರೂ ವೇಗವಾಗಿ ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು.