ಸುಳ್ಯ (ದಕ್ಷಿಣ ಕನ್ನಡ) : ಪ್ರವೀಣ್ ಹತ್ಯೆ ಪ್ರಕರಣ ತಲೆ ತಗ್ಗಿಸುವಂತಹ ಘಟನೆ. ರಾಜ್ಯದಲ್ಲಿ ಇಂಟಲಿಜೆನ್ಸ್ ಸಂಪೂರ್ಣ ವಿಫಲಗೊಂಡಿದ್ದು, ಅದಕ್ಕಾಗಿಯೇ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಇವರೆಲ್ಲಾ ದಿನಾ ಭಾಷಣ ಹೊಡೀತಾ ಇದ್ರು. ಈಗ ಅವರದೇ ಪಕ್ಷದ ಕಾರ್ಯಕರ್ತನಿಗೆ ರಕ್ಷಣೆ ಕೊಡದವರು ಬೇರೆಯವರಿಗೆ ಹೇಗೆ ರಕ್ಷಣೆ ಕೊಡುತ್ತಾರೆ. ಕೇವಲ ಮೊಸಳೆ ಕಣ್ಣೀರು ಸುರಿಸಿ ಪ್ರಯೋಜನವಿಲ್ಲ ಎಂದರು.
ಮೃತ ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದು, ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕಾಂಗ್ರೆಸ್ ಮುಖಂಡರು ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳುವ ನಡುವೆ ಪ್ರವೀಣ್ ಅವರ ಚಿಕ್ಕಪ್ಪ ಜಯರಾಮ್ ಎಂಬವರು ಮಾತನಾಡುವಾಗ ಕಾಂಗ್ರೆಸ್ ಮುಖಂಡ ರಮಾನಾಥ್ ರೈಯವರು ನೀವು ಈಗ ಮಾತನಾಡಬೇಡಿ ಎಂದು ಹೇಳಿದರು. ಈ ಸಮಯದಲ್ಲಿ ಆಕ್ರೋಶಗೊಂಡ ಕುಟುಂಬಸ್ಥರು, ಇಲ್ಲಿಯವರೆಗೆ ಕುಟುಂಬದೊಂದಿಗೆ ಇದ್ದದ್ದು ನಾವೇ. ನೀವು ಈಗ ಯಾಕೆ ಬಂದದ್ದು ? ನಾಡಿದ್ದು ಇದೇ ಕೊಲೆಗಾರರಿಗೆ ನೀವೇ ಜಾಮೀನು ನೀಡುವುದು. ಶೂ ಹಾಕಿಕೊಂಡು ಯಾಕೆ ಮನೆಯ ಒಳಗೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರು ತೆರಳುವಾಗ ನೆರೆದವರು ಕಾಂಗ್ರೆಸ್ ಗೆ ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಕಾಂಗ್ರೆಸ್ ನಿಯೋಗದಲ್ಲಿ ಭೇಟಿ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ರಮಾನಾಥ್ ರೈ, ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಓದಿ : ಪಿಎಫ್ಐ ಸದಸ್ಯರು ಸಿರಿಯಾ, ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದಿರುವ ಬಗ್ಗೆ ಮಾಹಿತಿ: ಶೋಭಾ ಕರಂದ್ಲಾಜೆ