ಮಂಗಳೂರು: ನಮ್ಮ ಪ್ರಧಾನಿಗೆ ಜನಪರ ಕೆಲಸ ಮಾಡುವುದು ಆದ್ಯತೆಯಲ್ಲ, ಚುನಾವಣೆ ಅವರ ಆದ್ಯತೆ. ಅದಕ್ಕಾಗಿ ಹರಿಯಾಣ ವಿಧಾನಸಭೆ ಚುನಾವಣಾ ತಯಾರಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಟೀಕೆ ಮಾಡಿದ್ದಾರೆ.
ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಬೆಂಗಳೂರಿಗೆ ಆಗಮಿಸುತ್ತಾರೆ. ಈ ವೇಳೆ ನೆರೆ ಪರಿಹಾರ ಅನುದಾನ ಬಿಡುಗಡೆ ಮಾಡಲು ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ ಈವರೆಗೆ ಯಾವುದೇ ಮನವಿ ನೀಡಲಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ ಬಂದಿದೆ. ಆದರೆ ಪ್ರಧಾನಿ ಒಂದೇ ಒಂದು ರಾಜ್ಯಕ್ಕೆ ಪ್ರವಾಸ ಕೈಗೊಂಡಿಲ್ಲ. ಯಾವುದೇ ವೈಮಾನಿಕ ಸಮೀಕ್ಷೆ ನಡೆಸಿಲ್ಲ, ಸರಿಯಾದ ಪರಿಹಾರವನ್ನೂ ನೀಡಿಲ್ಲ. ಅವರಿಗೆ ಚುನಾವಣೆ ಗೆಲ್ಲುವುದರಲ್ಲಿ ಮಾತ್ರ ಆಸಕ್ತಿಯಿದ್ದು, ಜನಪರ ಕೆಲಸದಲ್ಲಿ ಇಲ್ಲ ಎಂದು ದೂರಿದರು.
ಭಾರತದ ಆರ್ಥಿಕತೆ ಕಠಿಣ ಪರಿಸ್ಥಿತಿಗೆ ತಲುಪಿದೆ. ಆಟೋಮೊಬೈಲ್, ಬಟ್ಟೆ ಕಾರ್ಖಾನೆಗಳು ಮುಚ್ಚಲ್ಪಡುತ್ತಿವೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತವಾಗಿ ಅಮೆರಿಕದ 30-40 ಬ್ಯಾಂಕುಗಳು ದಿವಾಳಿಯಾಗಿದ್ದವು. ಆದರೆ ಭಾರತದ ಬ್ಯಾಂಕುಗಳು ದಿವಾಳಿಯಾಗಿರಲಿಲ್ಲ. ಅವರು ದೇಶದ ಆರ್ಥಿಕತೆ ಸುಸ್ಥಿರತೆಯಲ್ಲಿರುವಂತೆ ಮಾಡಿದ್ದರು. ಇಂದು ಬಿಜೆಪಿಯ ಆರ್ಥಿಕ ನೀತಿಯಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಯವರು ಧರ್ಮ, ದೇಶಪ್ರೇಮ, ದೇವರು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಹೆಸರಿಗೆ ಧರ್ಮ, ದೇಶಪ್ರೇಮ ಎಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ನಾವು ಕೂಡಾ ಧರ್ಮ ವಿಶ್ವಾಸಿಗಳು, ದೇವರಲ್ಲಿ ನಂಬಿಕೆಯಿಟ್ಟವರು. ಆದರೆ ಬಿಜೆಪಿಯವರು ಅದನ್ನು ರಾಜಕೀಯವಾಗಿ ಬಳಸಿ ಬೇಳೆ ಬೇಯಿಸಿಕೊಳ್ಳವವರು. ಮೋದಿ ವಿರುದ್ಧ ಮಾತನಾಡಿದರೆ ಅವರು ದೇಶದ್ರೋಹಿಗಳಾಗುತ್ತಾರೆ ಎಂದು ಟೀಕೆ ಮಾಡಿದರು.
ಅಕ್ರಮ ಮರಳುಗಾರಿಗೆ ತಡೆದಿದ್ದೇ ಸೆಂಥಿಲ್ಗೆ ಮುಳುವಾಯಿತು:
ದೇಶದಲ್ಲಿ ಪ್ರಜಾಪ್ರಭುತ್ವದ ಆಧಾರಸ್ತಂಭ ಕುಸಿಯುತ್ತಿದೆ. ಸೈದ್ಧಾಂತಿಕ ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಭ್ರಷ್ಟ ಅಧಿಕಾರಿ ಎಂದು ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಮರಳು ಮಾಫಿಯಾಗಳಿಗೆ ಕಡಿವಾಣ ಹಾಕಲು ಡಿಸಿ, ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಪಡೆಯುವಂತೆ ಮಾಡಿದರು. ಇದರಿಂದ ಅಕ್ರಮ ಮರಳುಗಾರಿಕೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಕ್ರಮ ಮಾಡುತ್ತಿರುವವರು ಡಿಸಿ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ನಿರಾಧಾರ ಎಂದು ಹೇಳಿದರು.
ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡಲ್ಲ:
ಕಾಂಗ್ರೆಸ್ ಎಂದೂ ಕೀಳುಮಟ್ಟದ ರಾಜಕೀಯ ನಡೆಸಿಲ್ಲ. ಬಿಜೆಪಿ ಕೀಳುಮಟ್ಟದ ರಾಜಕೀಯ ನಡೆಸುತ್ತಲೇ ಬಂದಿದೆ. ಹಿಂದೆ ದ.ಕ ಜಿಲ್ಲೆಯಲ್ಲಿ ಕಾರ್ತಿಕ್ ರಾಜ್, ಹರೀಶ್ ಪೂಜಾರಿ ಹತ್ಯೆಯಾದಾಗಲೂ ಇದೇ ರೀತಿಯ ಕೀಳುಮಟ್ಟದ ರಾಜಕೀಯ ನಡೆಸಿದೆ. ಬಳಿಕ ಹತ್ಯೆಯಲ್ಲಿ ಅವರದ್ದೇ ಜನರಿದ್ದಾರೆ ಎಂದಾಗ ಸುಮ್ಮನಾಗಿದ್ದರು ಎಂದು ಆರೋಪಿಸಿದರು.