ಮಂಗಳೂರು: ಮೊನ್ನೆಯಿಂದಲೂ ಸುರಿಯುತ್ತಿರುವ ಭಾರೀ ಮಳೆಗೆ ರವಿವಾರ ಗುಡ್ಡೆಕೊಪ್ಲದ ಮಸೀದಿ ಬಳಿಯಲ್ಲಿ ವಾಸವಿರುವ ಪುಷ್ಪ ಆಚಾರ್ಯ ಎಂಬುವರ ಮನೆ ಗೋಡೆಯು ಮಳೆಗೆ ಕುಸಿದ ಪರಿಣಾಮ ಹೆಂಚು ಸಹಿತ ಮನೆಯು ಧರಾಶಾಹಿಯಾಗಿದೆ. ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಡ್ಡೆಕೊಪ್ಲ ದಿ. ಶಶಿಧರ ಆಚಾರ್ಯ ಪತ್ನಿ ಪುಷ್ಪ ಹಾಗೂ ಮೂರು ಮಂದಿ ಮಕ್ಕಳು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಓರ್ವ ಗಂಡು ಮಗ, ಇಬ್ಬರು ಪುತ್ರಿಯರಿದ್ದು ಮೂವರೂ ಕೆಲಸಕ್ಕೆ ಹೋಗುತ್ತಾರೆ. ತಾಯಿ ಮನೆಯಲ್ಲಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮನೆಯ ಹೆಂಚಿನ ರಿಪೇರಿ ಕೆಲಸ ಮಾಡಿಸಿದ್ದರು. ಆದರೆ ಮೊನ್ನೆಯಿಂದಲೂ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಗೋಡೆಯು ಕುಸಿದು ಬಿದ್ದಿದೆ.
ಮೊದಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಕ್ಕೆ ಮನೆ ಕೂಡ ಕಳೆದುಕೊಂಡಿರುವುದು ಆಘಾತ ಉಂಟು ಮಾಡಿದೆ.