ಮಂಗಳೂರು: ನಮ್ಮ ಸಮಾಜದಲ್ಲಿ ಪ್ರತಿದಿನ ವಿವಿಧೆಡೆ ಪ್ರಯಾಣ ಬೆಳೆಸಿ ಅಲ್ಲಿನ ಸೌಂದರ್ಯ ಸವಿಯುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಇದರ ಜೊತೆಗೆ ಕೈಕಾಲಿನ ಸ್ವಾಧೀನ ಕಳೆದುಕೊಂಡು ಮನೆಯ ಛಾವಣಿಯನ್ನೇ ನೋಡುತ್ತಿರುವವರ ಸಂಖ್ಯೆಯು ದೊಡ್ಡದಿದೆ. ಹೀಗೆ ಹಾಸಿಗೆ ಹಿಡಿದವರನ್ನು ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯುವ ವಿಶೇಷ ಪ್ರಯತ್ನವೊಂದು ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯಿಂದ ಇಂತಹ ಒಂದು ಮಾದರಿ ಪ್ರಯತ್ನ ಮಾಡಲಾಗಿದೆ.
ಮರದಿಂದ ಬಿದ್ದು, ಬೆನ್ನು ಮೂಳೆ ಮುರಿದುಕೊಂಡು, ಬಾವಿಗೆ ಬಿದ್ದು ಕೈಕಾಲು ಸ್ವಾಧೀನ ಕಳೆದುಕೊಂಡು ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದು ಮನೆಯಲ್ಲಿಯೇ ದಿನ ಕಳೆಯುವ 6 ಮಂದಿಯನ್ನು ಮಂಗಳೂರಿನ ಕೋಸ್ಟಲ್ ಫ್ರೆಂಡ್ಸ್ ಆಯ್ಕೆ ಮಾಡಿದೆ. ಅಲ್ಲದೆ, ಅವರನ್ನು ಮಂಗಳೂರಿನ ಪ್ರವಾಸಿ ತಾಣಗಳಿಗೆ ಕರೆದೊಯ್ದಿದೆ.
ಒಂದು ದಿನದ ಸಾಂತ್ವನ ಸಂಚಾರ: ತಮ್ಮ ದೈನಂದಿನ ಕೆಲಸಕ್ಕೂ ಮತ್ತೊಬ್ಬರನ್ನು ಅವಲಂಬಿಸುವ ಇವರು ಹೊರಪ್ರಪಂಚ ನೋಡಿ ಹಲವು ವರ್ಷಗಳೇ ಸಂದಿವೆ. ಹೀಗೆ ಹಾಸಿಗೆ ಹಿಡಿದವರಿಗೆ ಒಂದು ದಿನದ ಮಟ್ಟಿಗೆ ಹೊರಪ್ರಪಂಚದ ಬೆಳಕು ತೋರಿಸಲು ಮುಂದಾದವರು ಕೋಸ್ಟಲ್ ಫ್ರೆಂಡ್ಸ್ ಎಂಬ ಸಮಾಜ ಸೇವಾ ಸಂಸ್ಥೆ. ದ.ಕ. ಜಿಲ್ಲೆಯ ಪೆರ್ನೆ, ಕಲ್ಲಾಪು, ಕುತ್ತಾರ್, ತೊಕ್ಕೊಟ್ಟು ಹಾಗೂ ಉಳ್ಳಾಲದ ಹಾಸಿಗೆ ಹಿಡಿದ ಮಂದಿ ಇದರಲ್ಲಿದ್ದಾರೆ. ಒಟ್ಟು ಆರು ಮಂದಿ ಹಾಸಿಗೆ ಹಿಡಿದವರಿಗೆ ಕುಟುಂಬ ಸಹಿತ ಒಂದು ದಿನದ ಸಾಂತ್ವನ ಸಂಚಾರವನ್ನು ಈ ಸಂಸ್ಥೆ ಒದಗಿಸಿದೆ. ಬೆಳಗ್ಗೆ ಪಿಲಿಕುಳ ನಿಸರ್ಗಧಾಮ, ಮಧ್ಯಾಹ್ನದ ಬಳಿಕ ತಣ್ಣೀರುಬಾವಿ ಬೀಚ್, ಸಂಜೆಯಾಗುತ್ತಿದ್ದಂತೆ ಮಾಲ್ಗೆ ಸುತ್ತಾಡಿಸಿದ್ದಾರೆ.
ಮಾಲ್ ಸುತ್ತಾಡಿ ಶಾಪಿಂಗ್ ಮಾಡಿದ ಕುಟುಂಬಗಳು: ಇವರಿಗೆ ಬೆಳಗ್ಗೆ ಬಿಎಂಎಸ್ ಹೋಟೆಲ್ನಲ್ಲಿ ಚಹಾ ಸೇವನೆ ಮಾಡಿಸಿ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನ, ಬೋಟಿಂಗ್ ಮಾಡಿಸಿ ಮಧ್ಯಾಹ್ನದ ಊಟ ಕೊಡಿಸಲಾಗಿದೆ. ನಂತರ ತಣ್ಣೀರುಬಾವಿ ಬೀಚ್ಗೆ ಕರೆದೊಯ್ದು, ಅಲ್ಲಿ ಟ್ರೀ ಪಾರ್ಕ್ ತೋರಿಸಿ, ಸಮುದ್ರ ವಿಹಾರ ಮಾಡಿಸಲಾಯಿತು. ಅಲ್ಲಿಂದ ನಗರದ ಫಿಝಾ ನೆಕ್ಸೆಸ್ ಮಾಲ್ಗೆ ಕರೆದೊಯ್ದು ಮಾಲ್ನಲ್ಲಿ ಸುತ್ತಾಡಿಸಲಾಯಿತು. ಜೊತೆಗೆ ಆರು ಕುಟುಂಬಕ್ಕೂ ತಲಾ ಐದು ಸಾವಿರ ರೂಪಾಯಿ ನೀಡಿ ಶಾಪಿಂಗ್ ಕೂಡ ಮಾಡಿಸಲಾಯಿತು. ಬಳಿಕ ಎಲ್ಲರನ್ನೂ ಅವರವರ ಮನೆಗೆ ಕಳುಹಿಸಲಾಯಿತು.
ಇಷ್ಟೆಲ್ಲಾ ಸುತ್ತಾಟದ ವೇಳೆ ಎದ್ದೇಳಲು ಆಗದವರನ್ನು ಹಾಸಿಗೆಯಲ್ಲಿಯೇ ಮಲಗಿಸಿಯೇ ಎತ್ತಿಕೊಂಡು ಕೊಂಡೊಯ್ಯಲಾಗಿದೆ. ಕುಳಿತುಕೊಳ್ಳಲು ಆಗುವವರನ್ನು ವ್ಹೀಲ್ ಚೇರ್ನಲ್ಲಿ ಕರೆದೊಯ್ಯಲಾಗಿದೆ. ಪ್ರತ್ಯೇಕ ಆರು ಆಂಬುಲೆನ್ಸ್ಗಳಲ್ಲಿ ಎಲ್ಲಾ ಕಡೆಗಳಲ್ಲಿ ಸುತ್ತಾಡಿಸಿದ್ದು, ಹಾಸಿಗೆ ಹಿಡಿದ ಓರ್ವನ ಸಹಾಯಕ್ಕೆ ಐದಾರು ಮಂದಿ ಸ್ವಯಂಸೇವಕರು ಕೈಜೋಡಿಸಿದ್ದಾರೆ. ಜೊತೆಗಿಬ್ಬರು ನರ್ಸ್ಗಳೂ ಇದ್ದರು.
ಈ ಬಗ್ಗೆ ಮಾತನಾಡಿದ ಕೋಸ್ಟಲ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಶರೀಫ್ ಅಬ್ಬಾಸ್, ನಾವು ಆರು ಮಂದಿಯನ್ನು ಪಿಲಿಕುಳ, ಗುತ್ತುಮನೆ, ಬೋಟಿಂಗ್, ಬೀಚ್ ಮತ್ತು ಮಾಲ್ ಸುತ್ತಾಡಿಸಿದೆವು. ಕತ್ತಲೆಕೋಣೆಯಲ್ಲಿ ಕಳೆಯುತ್ತಿರುವ ಅಶಕ್ತರಿಗೆ ಇತರರು ಪ್ರತಿ ವಾರ ಸಂಭ್ರಮಿಸುವಂತೆ ವ್ಯವಸ್ಥೆ ಮಾಡಿದೆವು. ಇತರ ಸಾಮಾಜಿಕ ಸಂಘಟನೆಗಳು ಕೂಡ ಇದನ್ನು ಮುಂದುವರಿಸಿಕೊಂಡು ಅವರ ಬಾಳಿನಲ್ಲಿ ಬೆಳಕಾಗಬೇಕು ಎನ್ನುವುದು ಇದರ ಉದ್ದೇಶ ಎಂದು ಹೇಳಿದರು.
ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷ ಇಮ್ತಿಯಾಝ್ ಮಾತನಾಡಿ, ನಾವು ಸಾಮಾಜಿಕ ಕಾರ್ಯ ಮಾಡುವಾಗ ಹಲವು ವರ್ಷಗಳಿಂದ ಹಾಸಿಗೆ ಹಿಡಿದವರ ಬಗ್ಗೆ ಗಮನಕ್ಕೆ ಬಂದಿತ್ತು. ಇವರನ್ನು ಸುತ್ತಾಡಿಸುವ ಯೋಜನೆ ನಮ್ಮ ಸಂಘದಿಂದ ಮಾಡಿದೆವು. ಇವರನ್ನು ನೋಡಲು ಆರು ತಂಡ ಮಾಡಿದೆವು. ಈ ಸುತ್ತಾಟದ ವೇಳೆ ಒಬ್ಬ ವೈದ್ಯರು ಮತ್ತು ಇಬ್ಬರು ನರ್ಸ್ಗಳು ಇದ್ದರು ಎಂದು ಹೇಳಿದರು.
ಹಾಸಿಗೆ ಹಿಡಿದಿರುವ ಮುಹಮ್ಮದ್ ಇರ್ಫಾನ್ ಎಂಬುವರು ಮಾತನಾಡಿ, ನಾನು ಮೂರೂವರೆ ವರ್ಷಗಳಿಂದ ಹಾಸಿಗೆ ಹಿಡಿದಿದ್ದೇನೆ. ಕೋಸ್ಟಲ್ ಫ್ರೆಂಡ್ಸ್ ತಂಡದವರು ನಮ್ಮನ್ನು ಸುತ್ತಾಡಿಸಲು ಕರೆದುಕೊಂಡು ಹೋಗಿದ್ದರು. ಪಿಲಿಕುಳ ಮೃಗಾಲಯ, ಬೋಟಿಂಗ್ ಮಾಡಿಸಿದ್ದಾರೆ. ತುಂಬಾ ಖುಷಿ ಆಯಿತು ಎಂದರು. ಒಟ್ಟಿನಲ್ಲಿ ಕೋಸ್ಟಲ್ ಫ್ರೆಂಡ್ಸ್ ಸಂಸ್ಥೆಯ ಮಾನವೀಯ ಕಳಕಳಿಯಿಂದ ಹಾಸಿಗೆ ಹಿಡಿದ ಆರು ಮಂದಿ ಹೊರಪ್ರಪಂಚದ ಸಂಪರ್ಕ ಪಡೆದಿದ್ದಲ್ಲದೆ, ಅಲ್ಲಿನ ಸೌಂದರ್ಯ ಸವಿಯುವಂತಾಗಿದೆ.
ಇದನ್ನೂ ಓದಿ: ಗಂಡನ ಅಂತಿಮ ಸಂಸ್ಕಾರಕ್ಕಾಗಿ ಪರದಾಟ.. ಮನೆ ಮನೆಗೆ ತೆರಳಿ ನೆರವು ಕೇಳಿದ ಪತ್ನಿ: ಸಹಾಯಕ್ಕೆ ಬಂದ ರೆಡ್ ಕ್ರಾಸ್