ಮಂಗಳೂರು: ಜಿಎಸ್ಟಿ ಕಟ್ಟಿಲ್ಲ ಎಂಬುದು ಸತ್ಯಕ್ಕೆ ದೂರವಾದದ್ದು, ಸಿದ್ದರಾಮಯ್ಯ ಮಾಹಿತಿ ತಿಳಿದು ಮಾತನಾಡಲಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಧರ್ಮಸ್ಥಳದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರತಿಪಕ್ಷ ನಾಯಕನಾಗಿ ಮಾಹಿತಿ ತಿಳಿದು ಮಾತನಾಡಲಿ, ಕೇಂದ್ರಕ್ಕೆ ಜಿಎಸ್ಟಿ ಕಟ್ಟಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ಕಿಡಿಕಾರಿದರು.
ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿನಂತಿಯಂತೆ ಇವತ್ತು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲು ಧರ್ಮಸ್ಥಳಕ್ಕೆ ಬಂದಿದ್ದೇನೆ. ಈ ಸಂದರ್ಭ ರಾಜ್ಯದ ಜನತೆಯ ಅಭಿವೃದ್ಧಿ ಹಾಗೂ ಒಳಿತಿಗಾಗಿ ಮಂಜುನಾಥನಲ್ಲಿ ಪ್ರಾರ್ಥನೆ ಮಾಡುವೆ ಎಂದು ಸಿಎಂ ಬಿಎಸ್ವೈ ಹೇಳಿದರು.
ಎಲ್ಲರ ನಿರೀಕ್ಷೆ ನಾಳಿನ ಉಪಚುನಾವಣಾ ಫಲಿತಾಂಶದ ಮೇಲಿದೆ. 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್, ಜೆಡಿಎಸ್ ಗೆ ತಲಾ ಒಂದು ಸ್ಥಾನ ಸಿಗಬಹುದಷ್ಟೇ. ನಮ್ಮ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗೋದಿಲ್ಲ. ಮೂರುವರೆ ವರ್ಷ ಸ್ಥಿರವಾದ ಸರಕಾರವನ್ನು ನಾವು ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.