ಮಂಗಳೂರು : ಪಶ್ಚಿಮ ಘಟ್ಟದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳನ್ನು ತನ್ನ ಜೀವಮಾನವಿಡೀ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದ ಚಾರ್ಮಾಡಿ ಹಸನಬ್ಬ ಮಾನವೀಯ ಕಾರ್ಯಕ್ಕಾಗಿ ಈ ಬಾರಿ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇದೀಗ ಈ ಪ್ರಶಸ್ತಿಯಿಂದ ಬಂದ ಹಣದಿಂದಲೇ ಅವರು ಆ್ಯಂಬುಲೆನ್ಸ್ ಖರೀದಿಸಿ ಮತ್ತೊಮ್ಮೆ ಉದಾರತೆ ಮೆರೆದಿದ್ದಾರೆ.
ಚಾರ್ಮಾಡಿ ಹಸನಬ್ಬ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ 5 ಲಕ್ಷ ರೂ ಬಹುಮಾನ ಬಂದಿತ್ತು. ಆ್ಯಂಬುಲೆನ್ಸ್ಗೆ 8 ಲಕ್ಷ ರೂ ಖರ್ಚಾಗಿದೆ. ಉಳಿದ ಹಣವನ್ನು ಚಾರ್ಮಾಡಿ ಹಸನಬ್ಬ ಟ್ರಸ್ಟ್ ಮಾಡಿ ಅದರಿಂದ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡು ಆ್ಯಂಬುಲೆನ್ಸ್ ವಾಹನ ಖರೀದಿಸಿದ್ದಾರೆ.
ಚಾರ್ಮಾಡಿಯಲ್ಲಿ ಸಣ್ಣ ಹೊಟೇಲ್ ಹೊಂದಿರುವ ಚಾರ್ಮಾಡಿ ಹಸನಬ್ಬನವರು 1983ರಿಂದ ಅಪಘಾತಗಳಾದಾಗ ನೆರವಿಗೆ ಧಾವಿಸುತ್ತಿದ್ದರು. ಚಾರ್ಮಾಡಿಯ 50ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳನ್ನು ಅವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿರಿಸಿ ರಕ್ಷಿಸುವ ಕಾರ್ಯ ಮಾಡುತ್ತಿದ್ದರು. ಗಾಯಾಳುಗಳನ್ನು ಜಾತಿ, ಮತ ನೋಡದೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಪ್ರಪಾತಕ್ಕೆ ಬಿದ್ದಿದ್ದ ಎಷ್ಟೋ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಈಗಿನಂತೆ ಫೋನ್ ವ್ಯವಸ್ಥೆಯೂ ಇಲ್ಲದ ವೇಳೆಯೂ ಅವರು ಅಪಘಾತವಾಗಿದ್ದ ಪ್ರದೇಶಕ್ಕೆ ಧಾವಿಸಿ ಸಾವಿರಾರು ಮಂದಿಯನ್ನು ಚಾರ್ಮಾಡಿ ಹಸನಬ್ಬನವರು ರಕ್ಷಿಸಿದ್ದಾರೆ. ಇದೀಗ ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಹಣವನ್ನು ಅಪಘಾತದ ಗಾಯಾಳುಗಳಿಗೆಂದೇ ಮೀಸಲಿಟ್ಟು ಆ್ಯಂಬುಲೆನ್ಸ್ ಖರೀದಿಸಿ ಉದಾರತೆ ಮೆರೆದಿರುವುದು ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.
ಈ ಬಗ್ಗೆ ಮಾತನಾಡಿದ ಚಾರ್ಮಾಡಿ ಹಸನಬ್ಬ, ಆ್ಯಂಬುಲೆನ್ಸ್ ಮೂಲಕ ಇನ್ನು ಮುಂದೆ ಚಾರ್ಮಾಡಿಯ 50 ಕಿ.ಮೀ. ವ್ಯಾಪ್ತಿಯಲ್ಲಿ ಅಪಘಾತಗೊಂಡು ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸುತ್ತೇವೆ. ರಾಜ್ಯೋತ್ಸವ ಪ್ರಶಸ್ತಿಯಿಂದ ಬಂದ 5ಲಕ್ಷ ರೂ. ಹಣದೊಂದಿಗೆ ಬ್ಯಾಂಕ್ನಿಂದ ಮೂರು ಲಕ್ಷ ರೂ. ಸಾಲ ಪಡೆದು ಆ್ಯಂಬುಲೆನ್ಸ್ ಖರೀದಿಸಲಾಗಿದೆ. ಚಾರ್ಮಾಡಿ ಹಸನಬ್ಬ ಚಾರಿಟಬಲ್ ಟ್ರಸ್ಟ್ ಹೆಸರಿನ ಈ ಆ್ಯಂಬುಲೆನ್ಸ್ಗೆ ಖರ್ಚುಗಳನ್ನು ನಾವೇ ಹಾಕುತ್ತೇವೆ. ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಯಾರಲ್ಲಿಯೂ ಹಣ ಕೇಳುವುದಿಲ್ಲ. ಅವರು ಇಂಧನ ವೆಚ್ಚ ಎಂದು ನೀಡಿದರೆ ತೆಗೆದುಕೊಳ್ಳುತ್ತೇವೆ. ಮಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಹೊರತುಪಡಿಸಿ ಬೆಳ್ತಂಗಡಿ ಆಸ್ಪತ್ರೆಯವರವರೆಗೆ ಕೊಂಡೊಯ್ಯುತ್ತೇವೆ ಎಂದರು.
ಇದನ್ನೂ ಓದಿ : ಬೆಳಗಾವಿ: ನಿರಾಶ್ರಿತ ಕೇಂದ್ರಗಳಲ್ಲಿ ನಿರ್ಗತಿಕರಿಗೆ ಅನ್ನ, ಆಶ್ರಯದ ಜೊತೆಗೆ ಕೌಶಲ್ಯ ತರಬೇತಿ