ಮಂಗಳೂರು(ದಕ್ಷಿಣ ಕನ್ನಡ): ಹಿಜಾಬ್ ಧರಿಸುವ ವಿಚಾರದಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿನಿಯರಿಗೆ ಬೆಂಬಲಿಸುವ ಬಗ್ಗೆ ಮಾಹಿತಿಗಳು ಬಂದಿದ್ದು, ಈ ಬಗ್ಗೆ ಸಾಕ್ಷ್ಯ ದೊರೆತರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್ ಯಡಪಡಿತ್ತಾಯ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಹಿನ್ನೆಲೆ, ಶುಕ್ರವಾರದಂದು ಸಿಡಿಸಿ ಅಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ಬಳಿಕ ಮಾತನಾಡಿದರು.
ಸಿಡಿಸಿ ಸಭೆಯಲ್ಲಿ ಕಾಲೇಜಿನಲ್ಲಿ ನಡೆದಿರುವ ಘಟನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಮುಂದೆ ಕಾಲೇಜಿಗೆ ಹಿಜಾಬ್ ಧರಿಸಿ ಬರುವುದನ್ನು ನಿರಾಕರಿಸಲಾಗಿದೆ. ಕಾಲೇಜು ಕ್ಯಾಂಪಸ್ಗೆ ಹಿಜಾಬ್ ಧರಿಸಿ ಬರಬಹುದು. ಆದರೆ ತರಗತಿ, ಲೈಬ್ರೆರಿ ಸೇರಿದಂತೆ ಎಲ್ಲಿಯೂ ಹಿಜಾಬ್ ಧರಿಸಲು ಅವಕಾಶವಿಲ್ಲ. ಅದನ್ನು ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕಳಚಿಟ್ಟು ತರಗತಿಗೆ ಬರಬೇಕು. ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತದೆ ಎಂದರು. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಅಗತ್ಯವಿದ್ದರೆ ಮಾಡುತ್ತೇವೆ. ಬೇರೆ ಕಾಲೇಜಿಗೆ ಹೋಗುವುದಾದರೆ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ. ನಮಗೆ ಬಂದಿರುವ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅನ್ವಯಿಸಲಿದೆ ಎಂದರು.
ಇದನ್ನೂ ಓದಿ: ಮಂಗಳೂರು ವಿವಿ ಕಾಲೇಜಿನ ಹಿಜಾಬ್ ವಿವಾದ : ವಿದ್ಯಾರ್ಥಿ ಸಂಘದ ಅಧ್ಯಕ್ಷನ ರಾಜೀನಾಮೆ
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ವಿವಿ ಕಾಲೇಜಿನಲ್ಲಿ ಸೋಮವಾರದಿಂದ ನೂರಕ್ಕೆ ನೂರರಷ್ಟು ನ್ಯಾಯಾಲಯ ಆದೇಶ ಪಾಲಿಸಬೇಕು. ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆ ಕಾಲೇಜಿನಲ್ಲಿ ಪ್ರತಿಭಟನೆ ಮಾಡಲಾಗಿದೆ. ಪದವಿ ಕಾಲೇಜುಗಳಿಗೆ ನ್ಯಾಯಾಲಯದ ಆದೇಶ ಅನ್ವಯ ಆಗಬೇಕೆಂಬ ಹಿನ್ನೆಲೆ, ಕೋರ್ಟ್ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುನಿವರ್ಸಿಟಿಯನ್ನು ಪಾರ್ಟಿ ಮಾಡಲಾಗಿದೆ. ಹೀಗಿರುವಾಗ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೆ ಅನ್ವಯ ಆಗಲಿದೆ ಎಂದು ಹೇಳಿದರು.