ಉಪ್ಪಿನಂಗಡಿ (ದಕ್ಷಿಣ ಕನ್ನಡ): ಉಪ್ಪಿನಂಗಡಿಯಲ್ಲಿ ಡಿ.14ರ ರಾತ್ರಿ ಠಾಣೆಯ ಮುಂಭಾಗ ನಡೆದ ಗಲಭೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಸಂಬಂಧ 10 ಮಂದಿ ಪಿಎಫ್ಐ ಕಾರ್ಯಕರ್ತರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ತಾಹೀರ್, ಸ್ನಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಪೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್ ಹಾಗೂ ತುಪೈಲ್ ಮಹಮ್ಮದ್ ಕೆ. ಕೃತ್ಯ ಎಸಗಿದ ಆರೋಪಿಗಳು ಎಂದು ದೂರಿನಲ್ಲಿ ಹೆಸರಿಸಲಾಗಿದೆ.
ಈ ಆರೋಪಿಗಳು ಉಪ್ಪಿನಂಗಡಿ ಠಾಣೆಯ ಮುಂಭಾಗ ಅಕ್ರಮ ಕೂಟ ರಚಿಸಿ ಠಾಣೆಗೆ ಕಲ್ಲು ಎಸೆದು ಠಾಣೆಯ ಮುಂಭಾಗದಲ್ಲಿದ್ದ ಗಾಜುಗಳನ್ನು ಪುಡಿ ಮಾಡಿದ್ದಾರೆ ಹಾಗೂ ಠಾಣೆಯ ಎದುರು ನಿಲ್ಲಿಸಿದ ಇಲಾಖಾ ವಾಹನಗಳನ್ನು ಜಖಂಗೊಳಿಸಿ, ಸರ್ಕಾರಿ ಆಸ್ತಿ ನಷ್ಟವುಂಟು ಮಾಡಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಪಿಎಸ್‌ಐ ಶ್ರೀಮತಿ ಓಮನ ಎನ್ ಕೆ ದೂರು ನೀಡಿದ್ದಾರೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಸುಬ್ರಹ್ಮಣ್ಯ ಕ್ರಾಸ್ ಬಳಿ ಡಿಸೆಂಬರ್ 7ರಂದು ಸಂಜೆ ಮೀನು ಮಾರಾಟದ ಅಂಗಡಿಯಲ್ಲಿದ್ದ ಮೂವರ ಮೇಲೆ ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ತಲ್ವಾರ್ ಮತ್ತು ರಾಡ್‌ನಿಂದ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಉಪ್ಪಿನಂಗಡಿ ಪೊಲೀಸರು ಡಿಸೆಂಬರ್ 13ರಂದು ಕೊಯಿಲ ನಿವಾಸಿ ಮಹಮ್ಮದ್ ಸಿನಾನ್ ಎಂಬಾತನನ್ನು ಬಂಧಿಸಿದ್ದರು. ಆರೋಪಿಯು ನೀಡಿದ ಮಾಹಿತಿಯನ್ನು ಆಧರಿಸಿ ಹಮೀದ್, ಝಕರಿಯಾ ಮತ್ತು ಮುಸ್ತಾಫ ಎಂಬವರನ್ನು ವಿಚಾರಣೆ ಸಲುವಾಗಿ ಠಾಣೆಗೆ ಕರೆಸಲಾಗಿತ್ತು.
ಈ ನಡುವೆ ವಶಕ್ಕೆ ಪಡೆದ ಮೂವರ ಪೈಕಿ ಹಮೀದ್ ಎಂಬುವರನ್ನು ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಡಿ.14 ರಂದು ಸಂಜೆ 7 ಗಂಟೆ ಸುಮಾರಿಗೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಪ್ರತಿಭಟನೆ ಮುಂದುವರೆದಿತ್ತು.
ಈ ವೇಳೆ, ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆದು ಲಾಠಿ ಚಾರ್ಜ್ ಸಹ ಮಾಡಲಾಗಿತ್ತು. ಈ ವೇಳೆ, ನಾಲ್ವರು ಪೊಲೀಸರು ಸೇರಿ ಪ್ರತಿಭಟನಾ ನಿರತ ಕಾರ್ಯಕರ್ತರಿಗೂ ಗಾಯಗಳಾಗಿತ್ತು. ಬಳಿಕ ಪುತ್ತೂರು ತಾಲೂಕು ದಂಡಾಧಿಕಾರಿಗಳು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಕಲಂ 144 ಸಿಆರ್‌ಪಿಸಿ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ: ಸೆಕ್ಷನ್ 5 ಜಾರಿಗೊಳಿಸಲು ಅನುಮತಿ ಕೋರಿದ ಸರ್ಕಾರ