ದಕ್ಷಿಣ ಕನ್ನಡ (ಪುತ್ತೂರು): ಕೊರೊನಾ ಲಾಕ್‌ಡೌನ್ ನಿಂದ ದುಡಿದು ತಿನ್ನುವ ರೈತ ವರ್ಗಕ್ಕೆ ಅತ್ಯಂತ ಹೆಚ್ಚು ಸಂಕಷ್ಟ ಉಂಟಾಗಿದ್ದು, ಇದರ ಪ್ರಯತ್ನಕ್ಕೆ ಮೊದಲ ಹಂತವಾಗಿ ಕ್ಯಾಂಪ್ಕೋ ಮೂಲಕ ರೈತರಿಂದ ತಿಂಗಳಿಗೆ 1 ಕ್ವಿಂಟಾಲ್ ಅಡಕೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಇದೀಗ ಮಾರುಕಟ್ಟೆಯ ಧಾರಣೆ ಹೆಚ್ಚು ಮಾಡುವ ಉದ್ದೇಶದಿಂದ ಖಾಸಗಿ ವರ್ತಕರಿಗೂ ಪುತ್ತೂರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಅಡಕೆ ಖರೀದಿಗೆ ಅವಕಾಶ ನೀಡುವ ಪ್ರಯತ್ನವೊಂದು ನಡೆದಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ , ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ನೇತೃತ್ವದಲ್ಲಿ ಬುಧವಾರ ವರ್ತಕರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಯಿತು.
ಪುತ್ತೂರು ತಾಲೂಕಿಗೆ ಸೀಮಿತವಾಗಿ ಇಂತಹ ಪ್ರಾಯೋಗಿಕ ಪ್ರಯತ್ನಕ್ಕೆ ಇದೀಗ ಎಪಿಎಂಸಿ ಮುಂದಾಗಿದ್ದು, ಎಪಿಎಂಸಿ ಪ್ರಾಂಗಣದಲ್ಲಿ ಇರುವ 50 ಖಾಸಗಿ ವರ್ತಕರಿಗೆ ಅಡಕೆ ಖರೀದಿಗೆ ಅವಕಾಶ ನೀಡುವುದು. ಈ ಸಂದರ್ಭದಲ್ಲಿ ಅಡಕೆ ಮಾರಾಟ ಮಾಡುವ ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಪತ್ರ ದಾಖಲೆಗಳನ್ನು ತರಬೇಕು.
ಮಾರಾಟ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸ ನಡೆಸಬೇಕು ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಪುತ್ತೂರು ತಾಲೂಕು ಅಡಕೆ, ರಬ್ಬರ್ ಹಾಗೂ ಕಾಳುಮೆಣಸು ಆಧಾರಿತ ಆರ್ಥಿಕತೆಯಿಂದ ಬೆಳೆಯುತ್ತಿದೆ. ಇಲ್ಲಿನ ಶೇ.70ರಷ್ಟು ಜನತೆ ಈ ಬೆಳೆಗಳನ್ನು ಬೆಳೆಯುತ್ತಿದ್ದು, ಶೇ.20 ಮಂದಿ ಈ ಬೆಳೆಗಳ ಪೂರಕ ವ್ಯವಸ್ಥೆಯಿಂದ ಬದುಕು ಸಾಗಿಸುತ್ತಿದ್ದಾರೆ.
ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ, ವರ್ತಕ ಮುಖಂಡರಾದ ಶಶಾಂಕ ಕೊಟೇಚಾ, ಭವಿನ್ ಶೇಟ್ ಕೋಡಿಂಬಾಡಿ, ಅಬೂಬಕ್ಕರ್ ಸಿದ್ದೀಕ್, ರವೀಂದ್ರನಾಥ ರೈ ಮತ್ತಿತರರು ಉಪಸ್ಥಿತರಿದ್ದರು.