ಮಂಗಳೂರು: ಖಾಸಗಿ ಬಸ್ ಮಾಲೀಕನೋರ್ವ ಇತರ ಬಸ್ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಸಮಯ ನಿರ್ವಹಣೆಯ ವಿಚಾರಕ್ಕೆ ಸಂಬಂಧಿಸಿದಂತೆ ದಿನನಿತ್ಯ ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ ಬಸ್ಗಳನ್ನು ನಗರದ ಬರ್ಕೆ ಪೊಲೀಸ್ ಸ್ಟೇಷನ್ ಮುಂಭಾಗ ನಿಲ್ಲಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಸ್ಟೇಟ್ ಬ್ಯಾಂಕ್ ನಿಂದ ಕಾರ್ ಸೀಟ್ - ಅಳಕೆ - ಕುದ್ರೋಳಿ- ಉರ್ವಸ್ಟೋರಿಗೆ ಸಂಚರಿಸುವ ಬಸ್ಸಿನ ನಿರ್ವಾಹಕರು ಹಾಗೂ ಚಾಲಕರಿಗೆ ಅದೇ ಮಾರ್ಗವಾಗಿ ಸಂಚರಿಸುವ ಮಹಿಮಾ ಎಂಬ ಖಾಸಗಿ ಬಸ್ ಮಾಲೀಕ ಮ್ಯಾಕ್ಸ್ವೆಲ್, ಬಸ್ಗಳ ಸಮಯ ಪಾಲನೆಯ ವಿಷಯಕ್ಕೆ ಸಂಬಂಧಿಸಿದಂತೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆ. ಮಾತನಾಡಲು ಹೋದರೆ ಗೂಂಡಾನಂತೆ ವರ್ತಿಸುತ್ತಿದ್ದಾನೆ. ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ ಎಂದು ಇತರೆ ಬಸ್ಗಳ ಸಿಬ್ಬಂದಿ ಆರೋಪಿಸಿದ್ದಾರೆ.
ತಾನೇ ಪೊಲೀಸ್ ದೂರು ನೀಡಿದ್ದಾನೆ ಎಂದು ಆರೋಪಿಸಿ ಇತರ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ರೊಚ್ಚಿಗೆದ್ದು ಬಸ್ನ್ನು ರಸ್ತೆಗಿಳಿಸದೆ ಬರ್ಕೆ ಪೊಲೀಸ್ ಸ್ಟೇಷನ್ ಎದುರು ನಿಲ್ಲಿಸಿದ್ದರು.
ಮ್ಯಾಕ್ಸ್ವೆಲ್ ದಿನನಿತ್ಯ ಬಸ್ ಸಮಯ ಪಾಲನೆಗೆ ಸಂಬಂಧಿಸಿ, ಕಿರುಕುಳ ನೀಡುತ್ತಿದ್ದಾನೆ. ಆದ್ದರಿಂದ ಪೊಲೀಸರು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಮುಂದೆ ಆತನಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಬಸ್ ಚಾಲಕ ರೋಹಿತ್ ಒತ್ತಾಯಿಸಿದರು.