ಬೆಳ್ತಂಗಡಿ: ಹಲವು ವರುಷಗಳಿಂದ ನಮಗೊಂದು ಶಾಶ್ವತ ಸೇತುವೆ ನಿರ್ಮಿಸಿ ಕೊಡಿ. ನಮ್ಮ ಸಮಸ್ಯೆಯನ್ನು ದೂರ ಮಾಡಿ ಎಂದು ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದ ಜನಪ್ರತಿನಿಧಿಗಳಿಂದಾಗಿ ಜೀವ ಭಯದಲ್ಲಿ ದಿನ ದೂಡುವ ಸ್ಥಿತಿ ಎದುರಾಗಿದೆ. ತನ್ನ ದಿನ ನಿತ್ಯದ ಜೀವನಕ್ಕೆ ಪ್ರಾಣದ ಹಂಗನ್ನು ತೊರೆದು ನದಿ ದಾಟುವ ದುಃಸ್ಥಿತಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಜಾರ ಪರಿಸರದ ಜನರದ್ದಾಗಿದೆ.
ಮಳೆಗಾಲ ಎಂದರೆ ಎಲ್ಲಿಲ್ಲದ ಭಯ ಇವರಿಗೆ ಕಾಡುತ್ತದೆ. ಕಳೆದ ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆ ಸೇರಿದಂತೆ ಹೈನುಗಾರಿಕೆಯನ್ನೇ ಜೀವಾಳವಾಗಿಸಿರುವ ನಡ ಗ್ರಾಮದ ಮೂಡಾಯಿಬೆಟ್ಟು ಬೋಜಾರ ನಿವಾಸಿಗಳಿಗೆ ಕಿಂಡಿ ಅಣೆಕಟ್ಟಿನ ಮೇಲೆ ನಿರ್ಮಿಸಿದ ಸೇತುವೆಯೇ ಸಂಪರ್ಕ ಕೊಂಡಿ. ಅದರೆ ಇದೀಗ ಈ ಕಿಂಡಿ ಅಣೆಕಟ್ಟಿನ ಸಂಪರ್ಕವೇ ಮುಳುವಾಗಿ ಪರಿಣಮಿಸಿದೆ.
ನಡ ಗ್ರಾಮದ ಬೋಜಾರದಲ್ಲಿ ಅವೈಜ್ಞಾನಿಕ ಕಿಂಡಿ ಅಣೆಕಟ್ಟು: ಬೋಜಾರಕ್ಕೆ ಸಂಪರ್ಕ ಕಲ್ಪಿಸುವ ಸೋಮಾವತಿ ನದಿಗೆ ಪ್ರಥಮವಾಗಿ 1980ರಲ್ಲಿ ಕಟ್ಟಿದ ಕಿಂಡಿ ಅಣೆಕಟ್ಟು ಈಗಲೋ ಆಗಲೋ ಎಂಬ ಸ್ಥಿತಿಗೆ ತಲುಪಿದೆ. ಸೋಮಾವತಿ ನದಿಯಲ್ಲಿರುವ ಮೊದಲ ಕಿಂಡಿ ಅಣೆಕಟ್ಟು ಇದಾಗಿದ್ದು, ನಂತರ 1996ರಲ್ಲಿ ಈ ಕಿಂಡಿ ಅಣೆಕಟ್ಟಿನ ಮೇಲೆಯೇ ಅವೈಜ್ಞಾನಿಕವಾಗಿ 4 ಅಡಿ ಅಗಲ 80 ಅಡಿ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಮರ ಕಸಕಡ್ಡಿಗಳು ಕೊಚ್ಚಿಕೊಂಡು ಬಂದು ಇದರಲ್ಲಿ ಸಿಲುಕಿಕೊಳ್ಳುತ್ತಿದ್ದು, ಕಳೆದ ಮಳೆಗೆ ದೊಡ್ಡ ಮರಗಳು ಸಿಲುಕಿಕೊಂಡು ಒಂದು ಭಾಗ ಸಂಪೂರ್ಣ ಕುಸಿದಿದೆ.
ಬೋಜಾರದ 26ಕ್ಕೂ ಅಧಿಕ ಕುಟುಂಬಗಳು ಜೊತೆಗೆ ಎಸ್.ಟಿ. ಕಾಲೋನಿ ಸೇರಿ 200ಕ್ಕೂ ಅಧಿಕ ಮಂದಿ ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ. ಸೇತುವೆಯ ಕುಸಿತದಿಂದ ಸಂಪರ್ಕ ಇಲ್ಲದಂತಾಗಿದೆ. ಸದ್ಯ ಅಡಿಕೆ ಹಾಗೂ ಮರವನ್ನು ಅಡಲಾಗಿ ಹಾಕಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿ ತಮ್ಮ ದಿನನಿತ್ಯದ ಕೆಲಸಗಳಿಗೆ ಪ್ರಾಣದ ಹಂಗು ತೊರೆದು ದಾಟುವಂತಹ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಈ ಪರಿಸರದ ಜನರು ಹೈನುಗಾರರಾಗಿದ್ದು, 35ಕ್ಕೂ ಅಧಿಕ ಕುಟುಂಬಗಳು 250 ಲೀಟರ್ ಹಾಲನ್ನು ಡೈರಿಗೆ ನೀಡುತ್ತಿದ್ದಾರೆ. ಕಳೆದ ಮಳೆಗಾಲಕ್ಕೆ ಸೇತುವೆ ಸಮೀಪದ ರಾಮಚಂದ್ರ ಎಂಬುವರ ಒಂದು ಎಕರೆಗೂ ಅಧಿಕ ಜಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಸೇತುವೆ ಕೊಚ್ಚಿ ಹೋಗಿ ಅಡಿಕೆ ಮರದ ಕಾಲು ಸಂಕವೇ ಇವರಿಗೆ ಸಂಪರ್ಕ ಕೊಂಡಿಯಾಗಿದೆ. ಇದರಿಂದ ಮೂಡಾಯಿಬೆಟ್ಟು ಶಾಲೆಗೆ ತೆರಳುವ 25ಕ್ಕಿಂತಲೂ ಅಧಿಕ ಮಕ್ಕಳು, ಹೈನುಗಾರರು ಎಲ್ಲಾ ಕೆಲಸಗಳಿಗೆ ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ.
ನದಿಯಲ್ಲಿ ನೀರು ಹೆಚ್ಚಾಗಿ ಬಂದರೆ ಅಡಿಕೆ ಮರದ ಈ ಸಂಪರ್ಕ ಕೊಂಡಿಯೂ ನೀರಲ್ಲಿ ಕೊಚ್ಚಿ ಹೋಗುವ ಆತಂಕ ಇಲ್ಲಿನ ನಿವಾಸಿಗಳದ್ದು. ಆನಾರೋಗ್ಯ ಸಮಸ್ಯೆಯಾದಲ್ಲಿ ಅಥವಾ ಕೃಷಿ ಉಪಕರಣ, ಇನ್ನಿತರ ದಿನನಿತ್ಯದ ಕೆಲಸಕ್ಕೆ ಬೋಜಾರ ನಿವಾಸಿಗಳು ಕಾಲು ಸಂಕ ದಾಟಿ ಹೋಗುವುದಿದ್ದರೆ ಮಂಜೊಟ್ಟಿ ತಲುಪಲು ಕೇವಲ 2 ಕಿ.ಮೀ. ಮಾತ್ರ. ಆದರೆ ಇದೀಗ ರಸ್ತೆ ಹಾಗೂ ಸೂಕ್ತ ಸೇತುವೆ ನಿರ್ಮಾಣವಾಗದೆ ಇರುವುದರಿಂದ ಬೋಜಾರದಿಂದ ಹತ್ಯಡ್ಕ-ಕೈಕಂಬ ರಸ್ತೆಯಾಗಿ ಸುಮಾರು 15ರಿಂದ 20 ಕಿ.ಮೀ. ಸುತ್ತಿ ಬಳಸಿ ನಗರಕ್ಕೆ ಬರಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೆ ಈ ಸೇತುವೆಗೆ ಯಾವುದೇ ರೀತಿಯ ರಕ್ಷಣಾ ಗೋಡೆ ಇಲ್ಲದಿರುವುದರಿಂದ ಶಾಲಾ ಮಕ್ಕಳು, ವಯಸ್ಸಾದವರು ತುಂಬಾ ಎಚ್ಚರಿಕೆ ವಹಿಸಿ ದಾಟಬೇಕಾಗುತ್ತದೆ.
ಹಲವು ವರ್ಷಗಳಿಂದ ನಮಗಾಗುತ್ತಿರುವ ತೊಂದರೆಯನ್ನು ವಿವಿಧ ಜನನಾಯಕರಲ್ಲಿ ಹೇಳಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಮಳೆಗಾಲದಲ್ಲಿ ಭಯದಲ್ಲೇ ದಿನ ದೂಡುವ ಸ್ಥಿತಿ ನಮ್ಮದು. ಶಾಲೆಗೆ ಹೋಗುವ ಮಕ್ಕಳು, ಮಹಿಳೆಯರು ಹಾಗೂ ವಯಸ್ಸಾದವರು ಇದೇ ಅಡಿಕೆ ಮರದ ಆಧಾರದಲ್ಲಿ ನದಿಯನ್ನು ದಾಟಬೇಕು. ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಎರಡು ಬಾರಿ ಮಹಿಳೆಯರಿಬ್ಬರು ಕಾಲು ಜಾರಿ ಬಿದ್ದಿದ್ದರು. ಅದೃಷ್ಟವಾಶತ್ ಸ್ಥಳೀಯರು ಅವರನ್ನು ರಕ್ಪಿಸಿದ್ದಾರೆ. ಹಾಗಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಸೂಕ್ತವಾದ ಜಾಗ ಪರಿಶೀಲಿಸಿ ನಮಗೆ ಶಾಶ್ವತ ಸಂಪರ್ಕ ಸೇತುವೆ ನಿರ್ಮಿಸಿ ನಮ್ಮ ಭಾಗದ ಜನರ ತೊಂದರೆಯನ್ನು ದೂರ ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.