ಮಂಗಳೂರು : ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿ ನ್ಯಾಯಾಂಗ ಬಂಧನದಲ್ಲಿರುವ ಆದಿತ್ಯ ರಾವ್ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್ ಇರಿಸಿರುವ ಬಗ್ಗೆ ಕರೆ ಮಾಡಿ ಆತಂಕ ಸೃಷ್ಟಿದ್ದ ಪ್ರಕರಣ ಸಂಬಂಧ ಸೈಬರ್ ಪೊಲೀಸರು ತನಿಖೆ ಕೈ ಗೆತ್ತಿಕೊಂಡಿದ್ದಾರೆ.
ನಗರದ ಬಲ್ಮಠದಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದ ಸಂದರ್ಭದಲ್ಲಿ ಆದಿತ್ಯ ರಾವ್ ಅಲ್ಲಿನ ಕಂಪ್ಯೂಟರ್ ಬಳಸಿ ಆನ್‌ಲೈನ್‌ನಲ್ಲಿ ಸ್ಫೋಟಕ ತಯಾರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದ್ದನು. ಅಲ್ಲದೆ ಆನ್‌ಲೈನ್ ಮೂಲಕ ಸ್ಫೋಟಕ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ಚೆನ್ನೈನಿಂದ ಖರೀದಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆತ ಕಳುಹಿಸಿರುವ ಇ-ಮೇಲ್‌ಗಳ ಕುರಿತು ಸೈಬರ್ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ಆತ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಫೋಟಕ ಇರಿಸಿ ಪರಾರಿಯಾದ ಬಳಿಕ ಮಲ್ಪೆಯಿಂದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರುವುದಾಗಿ ಹುಸಿ ಬಾಂಬ್ ಬೆದರಿಕೆ ಕರೆ ಹಾಕಿದ್ದನು. ಬಳಿಕ ಬೆದರಿಕೆ ಕರೆಗೆ ಬಳಸಿರುವ ಮೊಬೈಲ್ ಸಿಮ್‌ನ್ನು ಬಿಸಾಡಿದ್ದನು. ಈ ಬೆದರಿಕೆ ಕರೆಯ ಬಗ್ಗೆಯೂ ಸೈಬರ್ ಪೊಲೀಸರು ಆತನಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈತನ ಇಂಟರ್‌ನೆಟ್ ವ್ಯವಹಾರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.