ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರಿಂದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ಕಿಶೋರ್ ಅಮನ್ ಶೆಟ್ಟಿ ಮಂಗಳೂರಿನಲ್ಲಿ ಪಾರ್ಟಿ ಆಯೋಜಿಸುತ್ತಿದ್ದ ಎಂಬ ಮಾಹಿತಿಯಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಷೇಧಿತ ಮಾದಕ ವಸ್ತುಗಳನ್ನು ಸಾಗಾಟ ಮತ್ತು ಸೇವನೆ ಮಾಡುತ್ತಿದ್ದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎಬಿಸಿಡಿ ಹಿಂದಿ ಚಲನಚಿತ್ರದಲ್ಲಿ ನಟಿಸಿದ, ಡ್ಯಾನ್ಸರ್ ಆಗಿರುವ ಕಿಶೋರ್ ಅಮನ್ ಶೆಟ್ಟಿ (30) ಮತ್ತು ವರ್ಷದ ಹಿಂದೆ ದುಬೈನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿ ಭಾರತಕ್ಕೆ ಬಂದಿದ್ದ ಅಕೀಲ್ ನೌಶೀಲ್ (28) ಬಂಧಿತರು.
ಇವರಿಬ್ಬರು ಮಾದಕ ವಸ್ತು ಸೇವನೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದು, ಬೈಕ್‌ನಲ್ಲಿ ಹೋಗುತ್ತಿರುವಾಗ ಬಂಧಿಸಲಾಗಿದೆ. ಇವರಿಂದ ಎಂಡಿಎಂಎ ಮಾದಕ ವಸ್ತು, ಬಜಾಜ್ ಡಿಸ್ಕವರಿ ಬೈಕ್ ಮತ್ತು 2 ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ವಸ್ತುಗಳ ಮೌಲ್ಯ 1 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಆರೋಪಿಗಳು ಮುಂಬೈಯಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಇವರಿಗೆ ಬೆಂಗಳೂರು ಮತ್ತು ಇತರೆ ಕಡೆಯ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುವುದು. ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.