ಪುತ್ತೂರು: ಕೇಂದ್ರ ಸರಕಾರದ ಕೃಷಿ ಮಸೂದೆಯು ದೇಶದ ಕೃಷಿಕ್ಷೇತ್ರ ಹಾಗೂ ಕೃಷಿಕರ ಹಿತಾಸಕ್ತಿ ಕಾಯ್ದುಕೊಳ್ಳಲು ಪೂರಕವಾಗಿದ್ದು, 2020ರ ವೇಳೆ ಭಾರತ ಸಂಪೂರ್ಣ ಸ್ವಾವಲಂಬಿ ದೇಶದ ಜತೆ ಆಹಾರ ವಸ್ತುಗಳನ್ನು ರಫ್ತು ಮಾಡುವ ದೇಶವಾಗಿ ಜಗತ್ತಿನ ಗಮನ ಸೆಳೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮಂಗಳವಾರ ಇಲ್ಲಿಯ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತನಿಗೆ ತನ್ನ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರಕಾರ ಜಾರಿಗೆ ತಂದಿದೆ. ಇದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕಿರುವ ರೈತಪರ ಕಾಳಜಿ ಎತ್ತಿತೋರಿಸುತ್ತಿದೆ ಎಂದರು.
ಕೇಂದ್ರ ಸರಕಾರದ ಕೃಷಿ ಮಸೂದೆ ಮತ್ತು ರಾಜ್ಯ ಸರಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಕುರಿತಂತೆ ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್‌ನವರು, ಈ ಮಸೂದೆಯಿಂದ ತೊಂದರೆಯಾಗಿದೆ ಎಂದು ಹೇಳುವ ಪ್ರತಿಭಟನಾಕಾರರು ನೇರವಾಗಿ ಚರ್ಚೆಗೆ ಬನ್ನಿ. ಕೃಷಿ ಕ್ರಾಂತಿಗೆ ಕಾರಣವಾಗಲಿರುವ ಈ ಕಾಯ್ದೆಯಿಂದ ಆಗುವ ಮತ್ತು ಆಗಿರುವ ತೊಂದರೆಗಳ ಕುರಿತು ಚರ್ಚೆ ಮಾಡಿ ಎಂದು ಶಾಸಕ ಮಠಂದೂರು ನೇರ ಸವಾಲು ಹಾಕಿದರು.
ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 100ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂ.ಗೆ ಬಿಜೆಪಿಯಿಂದ ಸ್ಪರ್ಧಿಸಲು ಯುವ ವಿದ್ಯಾವಂತರು ಮುಂದೆ ಬರುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕರಾಗಿ ನೇಮಕಗೊಂಡ ಶಾಸಕ ಸಂಜೀವ ಮಠಂದೂರು ಅವರನ್ನು ಈ ಸಂದರ್ಭ ಪಕ್ಷದಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪುತ್ತೂರು ಗ್ರಾಮಾಂತರ ಮಂಡಲ ಸಹ ಪ್ರಭಾರಿ ವೆಂಕಟ ವಳಂಲಬೆ, ಜಿಲ್ಲಾ ಬಿಜೆಪಿ ಪ್ರಭಾರಿ ರಾಜೇಶ್, ಪುತ್ತೂರು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.