ಮೂಡಬಿದಿರೆ ( ದಕ್ಷಿಣ ಕನ್ನಡ) : ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಿ ಜನಾಕ್ರೋಶಕ್ಕೆ ಕಾರಣನಾಗಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಕೋಟಿ ಚೆನ್ನಯ ಗರಡಿಯಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.
ಮೂಡಬಿದಿರೆಯ ಕೆಲ್ಲಪುತ್ತಿಗೆಯ ಶ್ರೀಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ, ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ ತಪ್ಪು ಕಾಣಿಕೆ ಸಲ್ಲಿಸಿ, ದೈವ ದೇವರ ಮುಂದೆ ಕ್ಷಮೆಯಾಚನೆ ಮಾಡಿದರು.
ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಕೂಡ ಇದರಿಂದ ನೊಂದಿದ್ದಾರೆ. ಈ ಹಿನ್ನೆಲೆ ತಾನು ಕ್ಷಮೆಯಾಚನೆ ಮಾಡುತ್ತಿದ್ದೇನೆ.
ತನ್ನ ಮಾತಿನಿಂದ ಉಂಟಾದ ವಿವಾದಕ್ಕೆ ಕೋಟಿ ಚೆನ್ನಯರ ಗರಡಿಯಲ್ಲಿಯೇ ಬಂದು ನಿಂತು ಕ್ಷಮೆಯಾಚಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಎಲ್ಲಾ ವಿವಾದಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ ಎಂದು ಜಗದೀಶ್ ಅಧಿಕಾರಿ ಹೇಳಿದರು.
ಓದಿ : ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ನಿರ್ಮಾಣ ಯೋಜನೆ: ಶಾಸಕ ಹರೀಶ್ ಪೂಂಜ
ಇತ್ತೀಚೆಗೆ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಮಾತನಾಡುವ ವೇಳೆ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಜನಾರ್ದನ ಪೂಜಾರಿಯ ಕಾಲು ಹಿಡಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಕರೆ ಮಾಡಿ ಸೃಷ್ಟೀಕರಣ ಕೇಳಿದ್ದ. ಈ ವೇಳೆ ಸಂಯಮದಿಂದಲೇ ಉತ್ತರಿಸಿದ್ದ ಜಗದೀಶ್ ಅಧಿಕಾರಿ, ತನಗೆ ಮೀಟಿಂಗ್ ಇದೆ ಎಂದು ಹೇಳಿ ಮಾತು ಮುಗಿಸಿದ್ದರು.
ಆದರೆ, ಪೋನ್ ಕಟ್ ಆಗಿದೆ ಎಂದು ತಿಳಿದು, ತನ್ನ ಜೊತೆ ಇದ್ದವರ ಬಳಿ ಬಿಲ್ಲವರ ಬಗ್ಗೆ ಮತ್ತು ಕೋಟಿ ಚೆನ್ನಯರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದರು. ಇದನ್ನು ಕರೆ ಮಾಡಿದ ಯುವಕ ರೆಕಾರ್ಡ್ ಮಾಡಿ ವೈರಲ್ ಮಾಡಿದ್ದ. ಈ ಆಡಿಯೋ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.