ಮಂಗಳೂರು: ಮಾತಿನ ಭರದಲ್ಲಿ ಬಿಜೆಪಿ ಮುಖಂಡನಿಂದ ಬಿಲ್ಲವ ಸಮುದಾಯದ ನಿಂದನೆಯಾಗಿರುವ ಆಡಿಯೊ ವೈರಲ್ ಆಗಿದ್ದು, ಈ ಬಗ್ಗೆ ಬಳಿಕ ಇದೀಗ ಬಿಲ್ಲವ ಸಮುದಾಯ ಪೊಲೀಸ್ ದೂರು ನೀಡಿದೆ.
ಮೂರು ದಿನಗಳ ಹಿಂದೆ ಮೂಡುಬಿದಿರೆಯ ವಾಲ್ಪಾಡಿಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಭಾಷಣ ಮಾಡುವ ವೇಳೆ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರು ಪಟ್ಟದವರ ಕಾಲು ಹಿಡಿಯುತ್ತೇನೆ, ಆದರೆ ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ ಎನ್ನುವ ವೀಡಿಯೋ ವೈರಲ್ ಆಗಿತ್ತು.
ಇದರ ಬಗ್ಗೆ ಜಗದೀಶ್ ಅಧಿಕಾರಿಯವರಿಗೆ ಬಿಲ್ಲವ ಸಮುದಾಯದವರು ಸಾಕಷ್ಟು ಮಂದಿ ಕರೆ ಮಾಡಿ ಸ್ಪಷ್ಟನೆ ಕೇಳಿದ್ದಾರೆ. ಇದೇ ರೀತಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದು, ಜಗದೀಶ್ ಅಧಿಕಾರಿಯವರ ಜೊತೆಯಲ್ಲಿ ಜನಾರ್ದನ ಪೂಜಾರಿಯವರ ಕಾಲು ಹಿಡಿಯುವ ವಿಚಾರವಾಗಿ ವಾಗ್ವಾದ ನಡೆದಿದೆ. ಈ ಸಂದರ್ಭ ಜಗದೀಶ್ ಅಧಿಕಾರಿಯವರು ಸಂಯಮದಿಂದ ಉತ್ತರ ನೀಡಿದ್ದಾರೆ.
ಆದರೆ ಆರು ನಿಮಿಷದ ಬಳಿಕ ತಾನೊಂದು ತುರ್ತು ಸಭೆಯಲ್ಲಿದ್ದೇನೆಂದು ಕರೆ ಮಾಡಿದವರಿಗೆ ಜಗದೀಶ್ ಅಧಿಕಾರಿಯವರು ಹೇಳಿದ್ದಾರೆ. ಆದರೆ ತಾನು ಕರೆ ಕಟ್ ಮಾಡಿದ್ದಾನೆಂದು ತಿಳಿದು ಅವರು ತಮ್ಮೊಂದಿಗೆ ಇದ್ದವರ ಬಳಿ ತುಳುನಾಡಿನ ಕ್ರಾಂತಿ ಪುರುಷರಾದ ಕೋಟಿ-ಚೆನ್ನಯರು, ಬಿಲ್ಲವ ಸಮುದಾಯದವರ ವಿರುದ್ಧ ಮಾತನಾಡಿದ್ದಾರೆ. ಆದರೆ ಕರೆ ಮಾಡಿದಾತ ಪೂರ್ತಿ ಇದನ್ನು ರೆಕಾರ್ಡ್ ಮಾಡಿದ್ದು, ಇದೀಗ ಈ ಆಡಿಯೋ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದೆ. ಇದರಿಂದ ಬಿಲ್ಲವ ಸಮುದಾಯದಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ದೂರು ದಾಖಲಿಸಲಾಗಿದೆ.