ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಬಿಜೆಪಿ ಹಿಟ್ಲರ್‌ನ ಫ್ಯಾಸಿಸಂ ನೀತಿ ಅನುಸರಿಸುತ್ತಿದೆ. ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಈ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಮಸೂದೆಯನ್ನು 2023ರಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಮುಂದಿನ 2024ರ ಲೋಕಸಭೆ ಚುನಾವಣೆಗೆ ಜನರ ಮತ ಸೆಳೆಯಲು ಈ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ. ಇದರಿಂದ ಭಾರತೀಯರ ಏಕತೆಗೆ ಧಕ್ಕೆಯಾಗುತ್ತಿದೆ. ದೇಶದ ಒಳಿತು, ಸೌಹಾರ್ದತೆಯ ಸಮಾಜಕ್ಕಾಗಿ ನಾವು ಕೇಂದ್ರದ ನಿರ್ಧಾರವನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಏಕಾಏಕಿ ಈ ಮಸೂದೆಯನ್ನು ಕೇಂದ್ರ ಸರ್ಕಾರ ಏಕೆ ತಿದ್ದುಪಡಿ ಮಾಡಲು ಹೊರಟಿರೋದಕ್ಕೆ ಸ್ಪಷ್ಟನೆ ನೀಡಬೇಕು. ಪ್ರತಿಯೊಂದು ವಿಚಾರವನ್ನೂ ರಾಜಕೀಯ ದೃಷ್ಟಿಯಿಂದ ನೋಡಬಾರದು. ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ನೋಡಲು ಸಾಧ್ಯವಿಲ್ಲ. ಇಂದು ಇಂತಹ ತಿದ್ದುಪಡಿ ತಂದು ಅಲ್ಪಸಂಖ್ಯಾತರನ್ನು ಕೈಬಿಡುವ ಯೋಚನೆಯಲ್ಲಿರುವ ಇವರು ಮುಂದೆ ಕ್ರಿಶ್ಚಿಯನ್ನರು ನಂತರ ದಲಿತರು ಆನಂತರ ಜೈನರನ್ನೂ ಬಿಡುತ್ತಾರೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಇಂತಹ ನಿರ್ಧಾರಗಳನ್ನು ವಿರೋಧಿಸಬೇಕಾಗುತ್ತದೆ ಎಂದು ಖಾದರ್ ಎಚ್ಚರಿಸಿದ್ರು.
ಅಸ್ಸಾಂನಲ್ಲಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಎನ್.ಆರ್.ಸಿ ಜಾರಿಗೊಳಿಸಿದ್ದಾರೆ. ಆದರೆ, ಅಲ್ಲಿಯ ಬಹಳಷ್ಟು ಬಿಜೆಪಿ ಮುಖಂಡರುಗಳಿಗೇ ಭಾರತದ ಪೌರತ್ವವಿಲ್ಲ. ಹಾಗಾದರೆ, ಅವರು ಭಾರತದ ಪೌರರಲ್ಲವೇ? 2021ರ ಸಮಯದಲ್ಲಿ ಜನಗಣತಿ ಆರಂಭವಾಗುತ್ತದೆ. ಅದರ ಮಧ್ಯೆ ಇಂತಹ ಮಸೂದೆಯನ್ನು ಜಾರಿಗೊಳಿಸಬೇಕಾ? ಎಂದು ಅವರು ಪ್ರಶ್ನಿಸಿದರು.