ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಘಟನೆ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ನಡೆಯಲಿರುವ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ ಅರುಣ್ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಯಲ್ಲಿ ಅರುಣ್ ಸಿಂಗ್ ಪರೀಕ್ಷೆ ನಡೆಸಿದ ವೈದ್ಯರು, ಯಾವುದೇ ತೊಂದರೆ ಇಲ್ಲವೆಂದು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಉಡುಪಿಗೆ ವಾಹನದಲ್ಲಿ ರಸ್ತೆ ಮೂಲಕ ಅರುಣ್ ಸಿಂಗ್ ತೆರಳಿದ್ದಾರೆ
ನಿನ್ನೆ ರಾತ್ರಿ ದೆಹಲಿಯಿಂದ ಬಂದಿದ್ದ ಅರಣ್ ಸಿಂಗ್ ಮತ್ತು ಜೆ ಪಿ ನಡ್ಡಾ: ಉಡುಪಿ ಮತ್ತು ಬೈಂದೂರಿನಲ್ಲಿ ಇಂದು ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿನ್ನೆ ರಾತ್ರಿ ಮಂಗಳೂರಿಗೆ ಆಗಮಿಸಿದ್ದರು. ಅರುಣ್ ಸಿಂಗ್ ನಿನ್ನೆ ಬೆಳಗ್ಗೆ ಮಂಗಳೂರಿಗೆ ಬಂದಿದ್ದರು. ಜೆ ಪಿ ನಡ್ಡಾ ಅವರು ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾತ್ರಿ 10.20ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿದ್ದರು.
ಇದನ್ನೂ ಓದಿ: 'ರೌಡಿಗಳನ್ನು ಮುಂದಿಟ್ಟು ಬಿಜೆಪಿ ಗೆಲ್ಲುವ ತಂತ್ರ': ಕಾಂಗ್ರೆಸ್ ಟೀಕೆ
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದಕ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ವೇದ ವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವೈ., ರಾಜೇಶ್ ನ್ಯಾಕ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡು ಬಿದಿರೆ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ ಸಹಿತ ಪಕ್ಷದ ಪ್ರಮುಖರು ಅವರನ್ನು ಬರಮಾಡಿಕೊಂಡಿದ್ದರು. ಬಳಿಕ ಜೆ ಪಿ ನಡ್ಡಾ ಮತ್ತು ಅರುಣ್ ಸಿಂಗ್ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿ ಹಗಲು ಹೊತ್ತು ನಡೆಯುವುದರಿಂದ ವಿಮಾನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಸೋಮವಾರ ಬೆಳಗ್ಗೆ ಆಗಮಿಸಬೇಕಾಗಿದ್ದ ನಡ್ಡಾ ಮತ್ತು ಅರುಣ್ ಸಿಂಗ್ ಒಂದು ದಿನ ಮೊದಲೇ ಮಂಗಳೂರಿಗೆ ಆಗಮಿಸಿದ್ದರು. ಇಂದು ಮುಂಜಾನೆ ಅವರು ಉಡುಪಿ ಗೆ ತೆರಳಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಆನೆಯಿದ್ದ ಹಾಗೆ: ಮಾಜಿ ಸಚಿವ ಈಶ್ವರಪ್ಪ