ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 9 ತಿಂಗಳಿಂದ ಸಿಆರ್ಝಡ್ ಪರವಾನಿಗೆ ಇಲ್ಲದೆ ಮರಳುಗಾರಿಕೆ ನಡೆಯುತ್ತಿದೆ. ಬಿಜೆಪಿ ಶಾಸಕರ ಹಾಗೂ ಸರ್ಕಾರದ ಬೆಂಬಲದಿಂದ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ಸಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮರಳುಗಾರಿಕೆಗೆ ಹೊಸ ನೀತಿಯ ಅಗತ್ಯವಿಲ್ಲ. ಏಕೆಂದರೆ ಇದರಿಂದ ಸಂಪ್ರದಾಯ ಮರಳುಗಾರಿಕೆ ಮಾಡುವವರಿಗೆ ತೊಂದರೆ ಆಗುತ್ತದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಧನಕ್ಕೂ ಕುತ್ತು ತರಲಿದೆ ಎಂದು ಹೇಳಿದರು.
ಹೊಸ ಮರಳುಗಾರಿಕೆ ನೀತಿಗೆ ಅನುವು ಮಾಡಿಕೊಟ್ಟಲ್ಲಿ ಸಂಪ್ರದಾಯ ಮರಳುಗಾರಿಕೆ ಸ್ಥಗಿತಗೊಂಡು ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮರಳುಗಾರಿಕೆ ಮಾಡುವವರಿಂದಲೂ ಈಗ ಚಾಲ್ತಿಯಲ್ಲಿರುವ ಮರಳುಗಾರಿಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಗಣಿ ಸಂಸ್ಥೆಗೆ ಮರಳುಗಾರಿಕೆ ಪರವಾನಿಗೆ ನೀಡುವ ಬದಲು ಈ ಹಿಂದಿನವರಿಗೆ ಪರವಾನಿಗೆ ನೀಡಬೇಕು. ಸಿಆರ್ಝಡ್ನಲ್ಲಿ ಹಿರಿತನದ ಆಧ್ಯತೆ ಮೇರೆಗೆ ಪರವಾನಿಗೆ ಕೊಟ್ಟರೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವೆಂದು ರಮಾನಾಥ ರೈ ಅಭಿಪ್ರಾಯಪಟ್ಟರು.
ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿರುವ ಮರಳುಗಾರಿಕೆ ನೀತಿಗೆ ಸಾಕಷ್ಟು ಅಪಪ್ರಚಾರ, ಟೀಕೆಗಳು ವ್ಯಕ್ತವಾಗಿದ್ದವು. ಕ್ರಮೇಣ ಈ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 29.21 ಕೋಟಿ ರೂ. ರಾಜಧನ ದೊರಕಿತ್ತು. ಆದ್ದರಿಂದ ಹೊಸ ನೀತಿ ಅಕ್ರಮ ಮರಳುಗಾರಿಕೆಗೆ ಹಾದಿ ಮಾಡಿಕೊಟ್ಟು ಬೊಕ್ಕಸಕ್ಕೆ ಬರುವ ರಾಜಧನವೂ ಇಲ್ಲದಂತಾಗುತ್ತದೆ. ಹೊಸ ಮರಳುಗಾರಿಕೆ ನೀತಿಯ ಅಗತ್ಯವಿಲ್ಲ. ಪ್ರಸ್ತುತ ಇರುವ ವ್ಯವಸ್ಥೆ ಸರಿಯಾಗಿದೆ. ಅದನ್ನೇ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿದ್ದಲ್ಲಿ ಜಿಲ್ಲೆಯಲ್ಲಿ ಸುಲಭದಲ್ಲಿ ಮರಳು ಲಭ್ಯವಾಗುತ್ತದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ಗಳಾದ ಹರಿನಾಥ್, ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಮುಖಂಡರಾದ ಶಾಲೆಟ್ ಪಿಂಟೊ, ಅನಿಲ್ ಡಿಸೋಜ, ಶುಭೋದಯ ಆಳ್ವ, ನೀರಜ್ ಪಾಲ್ ಮತ್ತಿತರರು ಇದ್ದರು.