ಮಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ನಿರ್ಮೂಲನೆಗೆ ಬಹಳ ಕಠಿಣವಾದ ಕಾನೂನು ಕ್ರಮ ಜಾರಿಗೊಳಿಸಬೇಕೆಂಬುದು ಕೋರ್ ಕಮಿಟಿ ಸಭೆಯಲ್ಲಿ ಒಕ್ಕೊರಲ ತೀರ್ಮಾನವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ನಗರದ ಕೊಡಿಯಾಲ್ ಬೈಲ್ ನ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳು, ಮುಖಂಡರೊಂದಿಗೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರ್ ಕಮಿಟಿ ಸಲಹೆ ನೀಡಿದೆ ಎಂದು ಅವರು ಹೇಳಿದರು.
ಗೋಹತ್ಯೆ ನಿಷೇಧದ ಬಗ್ಗೆಯೂ ಕಾನೂನು ಜಾರಿ ಮಾಡುವಂತೆ ಚರ್ಚೆ ನಡೆದಿದ್ದು, 2008 ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಬಿಜೆಪಿ ಜಾರಿಗೊಳಿಸಿತ್ತು. ಬಳಿಕ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ಕಾನೂನನ್ನು ರದ್ದುಪಡಿಸಿತು. ಆದ್ದರಿಂದ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕಾನೂನನ್ನು ಪುನರ್ ವಿಮರ್ಶೆ ಮಾಡಿ ಇನ್ನೂ ಏನಾದರೂ ಕಾನೂನನ್ನು ಸೇರಿಸಿ ಕಠಿಣಗೊಳಿಸಿ ಗೋಹತ್ಯೆ ಕಾನೂನು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಸಲಹೆ ಕೇಳಿ ಬಂತು ಎಂದು ಲಿಂಬಾವಳಿ ಹೇಳಿದರು.
ಎರಡು ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ವಿಶ್ಲೇಷಣೆ ನಡೆಯಿತು. ಜೊತೆಗೆ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆಯೂ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ. ಈಗಾಗಲೇ 10-12 ಹೆಸರುಗಳು ಬಂದಿದ್ದು, ಅದನ್ನು ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ನ.25 ರಿಂದ ಡಿಸೆಂಬರ್ 5 ರವರೆಗೆ ಮಹಾಶಕ್ತಿ ಕೇಂದ್ರದ ಮಟ್ಟದಲ್ಲಿ ಪ್ರಶಿಕ್ಷಣ ವರ್ಗ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅದರಲ್ಲಿ ಮಹಾಶಕ್ತಿ ಕೇಂದ್ರದ ಪಂಚರತ್ನ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಮುಂದಿನ ಗ್ರಾಪಂ ಚುನಾವಣೆ ಬಗ್ಗೆ ಪಕ್ಷ ಸನ್ನದ್ಧವಾಗಿದ್ದು, ಮಂಡಲಗಳಲ್ಲಿ ವಾರ್ ರೂಂ, ಕಾಲ್ ಸೆಂಟರ್ಗಳು ಆರಂಭವಾಗುತ್ತದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.