ಕಾರವಾರ: ಮಳೆ ಬಂದ್ರೆ ಸಾಕು ಚಾವಣಿ ನೀರು ಸೋರಿ ಆಸ್ಪತ್ರೆಯೆಲ್ಲ ಕೆರೆಯಂತಾಗುತ್ತಿತ್ತು. ರಿಪೇರಿಗಾಗಿ ಸರ್ಕಾರದ ಅನುದಾನಕ್ಕೆ ಎಷ್ಟು ಕಾದು ಕುಂತ್ರೂ ಉಪಯೋಗವಾಗಲಿಲ್ಲ. ಇಲ್ಲಿನ ವೈದ್ಯಾಧಿಕಾರಿ ಅನುದಾನದ ಬಗ್ಗೆ ಯೋಚ್ನೆ ಮಾಡ್ದೇ ಸರ್ಕಾರದ ಸಹಾಯನೂ ಇಲ್ಲದೇ ಆಸ್ಪತ್ರೆ ದುರಸ್ತಿ ಕಾರ್ಯ ಮಾಡಿಸುತ್ತಿದ್ದಾರೆ
ಹೌದು ಭಟ್ಕಳ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನ ಕಳೆದ ಮೂರ್ನಾಲ್ಕು ವರ್ಷದ ಹಿಂದೆಯೇ ಮೇಲ್ದರ್ಜೆಗೆ ಏರಿಸಲಾಗಿದೆ. ಆದ್ರೆ, ಇಲ್ಲಿ ಮಾತ್ರ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಹಾಳಾಗಿದೆ. ಮುಖ್ಯವಾಗಿ ಆಸ್ಪತ್ರೆಗೆ ಹೊದಿಸಿದ್ದ ಚಾವಣಿಯೇ ಬಿದ್ದುಹೋಗಿ ಆರು ವರ್ಷವೇ ಕಳೆದಿದ್ದು, ಪ್ರತಿಸಲ ಮಳೆಗಾಲ ಬಂದಾಗ್ಲೂ ಆಸ್ಪತ್ರೆಗೆ ಬರುವ ಜನ ಸೋರುವ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಬಾಣಂತಿಯರು, ವಯೋವೃದ್ಧರು ಆಸ್ಪತ್ರೆ ಒಳಗಡೆ ಓಡಾಡ ಬೇಕಂದ್ರೂ ಛತ್ರಿ ಹಿಡಿದೇ ತಿರುಗಾಡಬೇಕಾದ ಅನಿವಾರ್ಯತೆ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಆದ್ರೆ, ಪ್ರತಿ ಮಳೆಗಾಲ ಸಮೀಪಿಸಿದಾಗಲೂ ಚಾವಣಿ ನಿರ್ಮಿಸಲು ಸರ್ಕಾರದ ತಂಡ ಆಗಮಿಸಿ ಸುಮಾರು 45 ಲಕ್ಷದ ವರೆಗೂ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿತ್ತು. ಅಷ್ಟೆ ಆದ್ರೆ ಯಾವುದೇ ಉಪಯೋಗವಂತೂ ಆಗಿಲ್ಲಾ.
ಹೀಗೆ ಕಳೆದ ಐದಾರು ವರ್ಷದಿಂದ ಸರ್ಕಾರದಿಂದ ಯಾವುದೇ ಕಾರ್ಯ ಆಗದ್ದನ್ನು ಮನಗಂಡ ವೈದ್ಯಾಧಿಕಾರಿ ಸಂಪೂರ್ಣ ಆಸ್ಪತ್ರೆಗೆ ಚಾವಣಿ ನಿರ್ಮಿಸಲು ಯೋಜನೆ ರೂಪಿಸಿ ಹಣವನ್ನು ನೀಡುವ ದಾನಿಗಳ ಹುಡುಕಾಟಕ್ಕೆ ತೊಡಗಿದ್ದಾಗ, ಕೊನೆಗೆ ಇವರಿಗೆ ಸಿಕ್ಕಿದ್ದು, ಇನ್ಫೋಸಿಸ್ ಪೌಂಡೇಷನ್. ತಕ್ಷಣ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿದ್ದಾರೆ. ಮೊದಲು ಅಷ್ಟೊಂದು ಹಣದ ಸಹಕಾರ ನೀಡಲು ಒಪ್ಪದ ಅವರು ನಂತರ ಡಾ. ಸವಿತಾ ಕಾಮತ್ ಅವರ ಒತ್ತಾಯಕ್ಕೆ ಮಣಿದು, ಆಸ್ಪತ್ರೆಯ ಸಂಪೂರ್ಣ ಚಾವಣಿಯನ್ನು ದುರಸ್ತಿ ಮಾಡಿಸಲು ಒಪ್ಪಿದ್ದು, ಕಳೆದ ಒಂದು ತಿಂಗಳಿಂದ 15 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ.
ಮುಂದಿನ ಕೆಲವೇ ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿದು ಲೋಕಾರ್ಪಣೆಯೂ ಆಗಲಿದೆ. ಆದರೆ ಸರ್ಕಾರದ ಅನುದಾನಕ್ಕಾಗಿ ನಂಬಿ ಕೂರದ ಡಾ. ಸವಿತಾ ಕಾಮತರ ಕಾಳಜಿಗೆ ಇದೀಗ ಭಟ್ಕಳ ಜನರಿಂದ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.