ಪುತ್ತೂರು : ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರ(ಪುಡಾ)ದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಭಾಮಿ ಅಶೋಕ ಶೆಣೈ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಂಗಳೂರು ಮಹಾನಗರವನ್ನು ಸ್ಮಾಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿದಂತೆ, ಪುತ್ತೂರು ನಗರವನ್ನು ಮಾದರಿ ನಗರವನ್ನಾಗಿ ರೂಪಿಸಲು ಅಮೃತ್ ಯೋಜನೆ ಸಹಕಾರಿಯಾಗಲಿದೆ. ಯಾವುದೇ ನಗರವು ಯೋಜನಾ ಬದ್ಧವಾಗಿ ಬೆಳೆದರೆ ಮಾತ್ರ ಜನರಿಗೆ ಉತ್ತಮ ಮೂಲಭೂತ ಸೌಲಭ್ಯಗಳು ಲಭ್ಯವಾಗುತ್ತವೆ. ಯೋಜನೆ-ಯೋಚನೆ-ಪ್ರಾಮಾಣಿಕ ಚಿಂತನೆಯೊಂದಿಗೆ ಕೆಲಸ ಮಾಡಿದಾಗ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದರು.
ಸಂಸದನಾದ ನನಗೆ, ಶಾಸಕ ಸಂಜೀವ ಮಠಂದೂರಿಗೆ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಪುತ್ತೂರಿನ ಋಣವಿದೆ. ಪುತ್ತೂರನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರೂಪಿಸುವಲ್ಲಿ ನಮ್ಮ ಸಹಕಾರ ಸದಾ ಇದೆ. ಜನಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮನೆತನದಿಂದ ಬಂದಿರುವ ಭಾಮಿ ಅಶೋಕ್ ಶೆಣೈ ಪಾರದರ್ಶಕ ವ್ಯಕ್ತಿತ್ವದವರು. ಇವರ ಅಧಿಕಾರಾವಧಿಯಲ್ಲಿ ಪುತ್ತೂರಿನ ನಿವಾಸಿಗಳಿಗೆ ಖಂಡಿತವಾಗಿಯೂ ಕಾನೂನು ಬದ್ಧ ಸಹಕಾರ ಸಿಗಲಿದೆ ಎಂದು ಹೇಳಿದರು.
ಓದಿ : ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಿಆರ್ಟಿಎಸ್ ಯೋಜನೆ ಅವ್ಯವಸ್ಥೆ!
ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಪುಷ್ಕರಣಿ ಹಾಗೂ ಬನ್ನೂರಿನ ಬಾವುದ ಕೆರೆಯನ್ನು 1.50 ಕೋಟಿ ರೂ. ಪುಡಾ ಅನುದಾನದೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಪುತ್ತೂರು ಪುಡಾ ಮತ್ತು ನಗರಸಭೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು, ಮುಂದಿನ 25 ವರ್ಷಗಳ ನಂತರದ ಪುತ್ತೂರನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುಡಾ ನೂತನ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ನಗರಸಭೆ ಮತ್ತು ಪುಡಾಗಳು ಸಮನ್ವಯದೊಂದಿಗೆ ಕೆಲಸ ಮಾಡುವ ಮೂಲಕ ಉದ್ದೇಶಿತ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಎಲ್ಲರ ಸಹಕಾರವು ಇದಕ್ಕೆ ಅಗತ್ಯ. ಶ್ರೀ ದೇವರ, ಗುರು ಹಿರಿಯರ ಆಶೀರ್ವಾದ ಹಾಗೂ ಪಕ್ಷ ನಿಷ್ಠೆ ನನಗೆ ಈ ಸ್ಥಾನವನ್ನು ಪ್ರಾಪ್ತಿಗೊಳಿಸಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್ ಶುಭ ಹಾರೈಸಿದರು.