ಪುತ್ತೂರು: 2020ನೇ ಸಾಲಿನ ಎರಡನೇ ಹಂತದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ವಿಜಿತ್ ಕೃಷ್ಣ (97.12), ಅಂಕಿತಾ. ಸಿ (93.44) ಅಂಕ ಗಳಿಸಿದ್ದಾರೆ. ಅದೇ ರೀತಿ ಜನವರಿಯಲ್ಲಿ ನಡೆದ ಮೊದಲನೇ ಹಂತದ ಜೆಇಇ ಪರೀಕ್ಷೆಯಲ್ಲಿ ಗೌರೀಶ್ ಕಜಂಪಾಡಿ 99.86ರಷ್ಟು ಅಂಕ ಗಳಿಸಿರುತ್ತಾನೆ.
ವಿಜಿತ್ ಕೃಷ್ಣ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ಆರನೇ ಸ್ಥಾನ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದನು. ಈತನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ರಾಮಚಂದ್ರ ರಾವ್ ಮತ್ತು ಗೀತಾ ರಾವ್ ದಂಪತಿಗಳ ಪುತ್ರ.
ಹಾಗೆಯೇ ಸುಳ್ಯ ತಾಲೂಕಿನ ಪಂಜ ಗ್ರಾಮದ ಗಂಗಾಧರ ಶಾಸ್ತ್ರೀ ಮತ್ತು ಸಾವಿತ್ರಿ ಇವರ ಸುಪುತ್ರಿಯಾದ ಅಂಕಿತಾ ಸಿ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 590 ಅಂಕ ಗಳಿಸಿದ್ದರು.
ಕಜಂಪಾಡಿಯ ಬಾಲರಾಜ ಕಜಂಪಾಡಿ ಮತ್ತು ರಾಜನಂದಿನಿ ದಂಪತಿಗಳ ಪುತ್ರನಾದ ಗೌರೀಶ ಕಜಂಪಾಡಿ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 9ನೇ ರ‍್ಯಾಂಕ್ ಮತ್ತು ಫಾರ್ಮಾದಲ್ಲಿ 10ನೇ ರ‍್ಯಾಂಕ್ ,ಕೆವಿಪಿವೈ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 454ನೇ ರ‍್ಯಾಂಕ್ ಪಡೆದುಕೊಂಡಿರುತ್ತಾನೆ.
ದೇಶದಾದ್ಯಂತ ನಡೆದ ಜೆಇಇ ಪರೀಕ್ಷೆಯಲ್ಲಿ ಒಟ್ಟು 6.35 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಾಲೇಜಿನಿಂದ ಸುಮಾರು 110 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿರುತ್ತಾರೆ. ಇದರಲ್ಲಿ ಶೇ.70 ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಇನ್ನೂ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.