ಬೆಳ್ತಂಗಡಿ: ಧರ್ಮಸ್ಥಳದ ಹೆಗ್ಗಡೆ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳು ಮತ್ತು ಅವಮಾನಕಾರಿ ಸಂದೇಶ ರವಾನಿಸಿದ ಆರೋಪಿಗೆ ಬೆಳ್ತಂಗಡಿಯ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವು 25 ಲಕ್ಷ ರೂ.ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಬೇಕು ಎಂದು ಆದೇಶಿಸಿದೆ.
ಧರ್ಮಸ್ಥಳದ ಅಂದಿನ ಮ್ಯಾನೇಜರ್ ಆಗಿದ್ದ ಎನ್.ಆರ್.ಉಡುಪ ಅವರು ಧರ್ಮಸ್ಥಳದ ಪರವಾಗಿ ಗುರುವಾಯನಕೆರೆಯ ಸೋಮನಾಥ್ ನಾಯಕ್ ವಿರುದ್ಧ ಬೆಳ್ತಂಗಡಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರಿಶೀಲಿಸಿ ದಂಡ ಕಟ್ಟುವಂತೆ ಸೂಚಿಸಿದೆ.
ವ್ಯಕ್ತಿ ಗೌರವಕ್ಕೆ ಹಾನಿ ತರುವ ಯಾವುದೇ ಹೇಳಿಕೆ ನೀಡಬಾರದು ಎಂದು ಆದೇಶಿಸಿದ್ದರೂ ಸಹ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸೋಮನಾಥ ನಾಯಕ್ ಧರ್ಮಸ್ಥಳದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಆದರೂ ಸಹ ಸೋಮನಾಥ್ ತನ್ನ ಕೃತ್ಯವನ್ನು ಮುಂದುವರಿಸುತ್ತಲೇ ಇದ್ದರು. ಧರ್ಮಸ್ಥಳದ ಹೆಗ್ಗಡೆಯವರ ವಿರುದ್ಧ ಸಂದೇಶಗಳನ್ನು ರವಾನಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇದೀಗ 3 ತಿಂಗಳೊಳಗೆ 25 ಲಕ್ಷ ರೂಪಾಯಿಯನ್ನು ಧರ್ಮಸ್ಥಳಕ್ಕೆ ನೀಡಬೇಕೆಂದು ಆದೇಶಿಸಿದೆ.
ಧರ್ಮಸ್ಥಳದ ಪರವಾಗಿ ಬೆಳ್ತಂಗಡಿಯ ನ್ಯಾಯವಾದಿ ರತ್ನವರ್ಮ ಬುಣ್ಣು ಮತ್ತು ಎಂ. ಬದರೀನಾಥ ಸಂಪಿಗೆತ್ತಾಯ ವಾದ ಮಂಡಿಸಿದ್ದಾರೆ.