ಬೆಳ್ತಂಗಡಿ: ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳ್ತಂಗಡಿ ಗುರುನಾರಾಯಣ ಸಭಾಭವನದ ಮುಂಭಾಗ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ, ಕೊರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯಾಪಕ ಅವ್ಯವಹಾರ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿವೆ. ಕಳೆದ ಬಾರಿಯ ನೆರೆ ಪರಿಹಾರದ ಹಣವನ್ನು ಇನ್ನೂ ಸಂತ್ರಸ್ತರಿಗೆ ವಿತರಿಸಿಲ್ಲ. ಸರ್ಕಾರ ಕೊರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಮಳೆಗಾಲದ ಅವಧಿಯಲ್ಲಿ ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಬಹಳಷ್ಟು ಹಾನಿಯಾಗಿದೆ. ಈ ಸಂದರ್ಭ ಶಾಸಕರು ಬೇನಾಮಿಯಾಗಿ ಕಾಳಜಿ ರಿಲೀಫ್ ಫಂಡ್ ಹೆಸರಿನಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ಅದನ್ನು ಯಾವುದಕ್ಕೋ ವಿನಿಯೋಗಿಸಿ ಖರ್ಚು ಮಾಡಲಾಗಿದೆ. ಅದರ ಲೆಕ್ಕಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು. ನಮ್ಮ ಸರ್ಕಾರ ಆಡಳಿತದಲ್ಲಿ ಇರುವಾಗ ನಾನು ತಾಲೂಕಿಗೆ ತಂದಂತಹ ಅನುದಾನಗಳನ್ನು ಶಾಸಕರು ತಾನು ತಂದದ್ದು ಎಂದು ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ನಂತರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟುಬಿಡದ ಪ್ರತಿಭಟನಾಕಾರರು ನಾವು ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಹೇಳಿ ಶಾಸಕರ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಇಲ್ಲಿಯೂ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ, 15 ದಿನಗಳೊಳಗೆ ಸಾರ್ವಜನಿಕರಿಗೆ ಲೆಕ್ಕ ನೀಡದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.