ಬೆಳ್ತಂಗಡಿ : ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬೆಳ್ತಂಗಡಿ ಲಾಯಿಲಾ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ 625 ಅಂಕಗಳ ಪೈಕಿ 622 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಬೆಳ್ತಂಗಡಿಯ ವೈದ್ಯರಾದ ಡಾ.ಶಶಿಕಾಂತ್ ಡೋಂಗ್ರೆ ಹಾಗೂ ಡಾ.ದೀಪಾಲಿ ಡೋಂಗ್ರೆ ದಂಪತಿ ಪುತ್ರಿ.
ಕೊಯ್ಯೂರು ಸರ್ಕಾರಿ ಫ್ರೌಢ ಶಾಲಾ ವಿಧ್ಯಾರ್ಥಿನಿ ಶೈವಿ.ಬಿ 625 ರಲ್ಲಿ 620 ಅಂಕ ಪಡೆದು ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದಲ್ಲಿ ದ.ಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ನಾಲ್ಕನೇ ಸ್ಥಾನಗಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೈವಿ, ತುಂಬಾ ಸಂತೋಷವಾಗುತ್ತಿದೆ. ನಾನು ಇಷ್ಟು ಅಂಕ ತೆಗೆದುಕೊಳ್ಳುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ನನ್ನ ತಂದೆ - ತಾಯಿಯ ಪ್ರೋತ್ಸಾಹ ಹಾಗೂ ಅಧ್ಯಾಪಕರ ಪರಿಶ್ರಮದಿಂದ ಇಷ್ಟೊಂದು ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ವಿಜ್ಞಾನ ವಿಭಾಗವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.
ಉತ್ತಮ ಗುಣ ನಡತೆಯ ಹುಡುಗಿ ಬಡ ಕುಟುಂಬದವಳಾಗಿದ್ದು, ಅವಳು 625 ಅಂಕ ತೆಗೆದುಕೊಳ್ಳುತ್ತಾಳೆ ಎಂಬ ಭರವಸೆ ನಮಗೆ ಇತ್ತು. ಆದರೂ ಅವಳು ಈ ಸಮಯದಲ್ಲಿ ಇಷ್ಟೊಂದು ಪ್ರಯತ್ನ ಪಟ್ಟಿದ್ದಾಳೆ. ತುಂಬಾ ಸಂತೋಷವಾಗುತ್ತಿದೆ ಎಂದು ಶಾಲಾ ಮುಖ್ಯ ಅಧ್ಯಾಪಕರಾದ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ 35 ಸರ್ಕಾರಿ ಫ್ರೌಢ ಶಾಲೆಗಳಿದ್ದು, ಅದರಲ್ಲಿ 9 ಶಾಲೆಗಳು ಎ ಗ್ರೇಡ್, 16 ಶಾಲೆಗಳು ಬಿ ಗ್ರೇಡ್, 10 ಶಾಲೆಗಳು ಸಿ ಗ್ರೇಡ್ ಪಡೆದಿವೆ. 9 ಅನುದಾನಿತ ಶಾಲೆಗಳಲ್ಲಿ 1 ಶಾಲೆ ಎ ಗ್ರೇಡ್, 7 ಶಾಲೆಗಳು ಬಿ ಗ್ರೇಡ್ ಹಾಗೂ 1 ಶಾಲೆ ಸಿ ಗ್ರೇಡ್ ಪಡೆದಿದೆ. 25 ಅನುದಾನಿತ ರಹಿತ ಶಾಲೆಗಳಲ್ಲಿ 21 ಶಾಲೆಗಳು ಎ ಗ್ರೇಡ್, 3 ಶಾಲೆಗಳು ಬಿ ಗ್ರೇಡ್ ಹಾಗೂ 1 ಶಾಲೆ ಸಿ ಗ್ರೇಡ್ ಪಡೆದಿದೆ.