ಬಂಟ್ವಾಳ(ದಕ್ಷಿಣ ಕನ್ನಡ): ಮುಂಬರುವ ಗ್ರಾ.ಪಂ ಚುನಾವಣೆಗೆ ಬಂಟ್ವಾಳ ತಾಲೂಕಿನಲ್ಲಿ ಈಗಿನಿಂದಲೇ ಕಾರ್ಯ ಶುರುವಾಗಿದೆ. ಈಗಾಗಲೇ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ಬ್ಯಾಲೆಟ್ ಬಾಕ್ಸ್ಗಳನ್ನು ಸ್ವಚ್ಚಗೊಳಿಸಿ ಹೊಳಪು ನೀಡಿ ಸಿದ್ಧಗೊಳಿಸಲಾಗುತ್ತಿದೆ.
ಒಟ್ಟು 396 ಬ್ಯಾಲೆಟ್ ಬಾಕ್ಸ್ಗಳನ್ನೀಗ ಶುಚಿಗೊಳಿಸಿ, ಹೊಳಪು ನೀಡುವ ಕಾರ್ಯ ನಡೆಯುತ್ತಿದೆ. ಕಾರಣ ಮುಂಬರುವ ಗ್ರಾ.ಪಂ ಚುನಾವಣೆಯು ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಆಗದೇ ಮತ ಪತ್ರಗಳೇ ಬಳಕೆಯಾಗುವುದರಿಂದ ಈ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ನಿರ್ವಹಣೆಯೂ ದೊಡ್ಡ ಸವಾಲು. ಬೂತ್ ಒಂದಕ್ಕೆ ಮತದಾರರ ಸಂಖ್ಯೆ 1 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಆರೋಗ್ಯ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಮತದಾರರಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ನಿಗದಿತ ತಾಪಮಾನಕ್ಕಿಂತ ಹೆಚ್ಚಿದ್ದಲ್ಲಿ ಆ ಮತದಾರರನ್ನು ಎರಡು ಬಾರಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮತದಾನದ ಅಂತ್ಯದ ವೇಳೆಯಲ್ಲಿ ಮತ ಹಾಕಲು ಅವಕಾಶ ಕಲ್ಪಿಸಲಾಗುತ್ತದೆ.
ಹಾಗೆಯೇ 80 ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕು ಶಂಕಿತ, ಹೋಂ,ಇನ್ಸ್ಟಿಟ್ಯೂಷನ್ನಲ್ಲಿರುವ ಮತದಾರರಿಗೆ ಅಂಚೆ ಮೂಲಕ ಮತದಾನದ ಅವಕಾಶ ಇರುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು 58 ಗ್ರಾ.ಪಂಗಳಿದ್ದು, ಈ ಪೈಕಿ ಪುದು ಗ್ರಾಪಂ ಹೊರತು ಪಡಿಸಿ 57 ಗ್ರಾಪಂ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಪುದು ಪಂಚಾಯತ್ನ ಚುನಾಯಿತ ಪ್ರತಿನಿಧಿಗಳ ಅವಧಿ ಇನ್ನು ಕೂಡ ಮುಗಿಯದಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ.
ಬಂಟ್ವಾಳ ತಾಲೂಕು ಆಡಳಿತದ ಚುನಾವಣಾ ಶಾಖಾ ವಿಭಾಗ ಈ ನಿಟ್ಟಿನಲ್ಲಿ ತಯಾರಿಯಲ್ಲಿ ನಿರತವಾಗಿದೆ ಎಂದು ಬಂಟ್ವಾಳ ಚುನಾವಣಾ ಶಾಖೆಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಪ್ರಸ್ತುತ 3,32,662 ಮತದಾರರು ಇದ್ದು, ಇವರಲ್ಲಿ 1,64,279 ಪುರುಷರು, 1,68,377 ಮಹಿಳೆಯರು ಹಾಗೂ 5 ಇತರರು ಇದ್ದಾರೆ. ಚುನಾವಣಾ ದಿನಾಂಕ ಪ್ರಕಟವಾಗುವವರೆಗೂ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿದೆ. 306 ಬೂತ್ ಜೊತೆಗೆ 90 ಆಕ್ಸಿಲರಿ ಬೂತ್ಗಳು ಸೇರಿ ಒಟ್ಟು 396 ಮತಗಟ್ಟೆಗಳು ಇರಲಿವೆ. ತಾಲೂಕು ಚುನಾವಣಾ ಶಾಖೆ ಈಗಾಗಲೇ ತಯಾರಿಗಳನ್ನು ಮಾಡಿಕೊಂಡಿದೆ. 57 ಚುನಾವಣಾಕಾರಿಗಳು ಮತ್ತು 61 ಸಹಾಯಕ ಚುನಾವಣಾಕಾರಿಗಳು ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಕೋವಿಡ್ ನ ಎಲ್ಲ ನಿಯಮಗಳನ್ನು ಪಾಲಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎನ್ನುತ್ತಾರೆ ಉಪ ತಹಶೀಲ್ದಾರ್ ರಾಜೇಶ್.