ಮಂಗಳೂರು : ಜೆಸಿಬಿ ಬಳಸಿ ಎಟಿಎಂ ಯಂತ್ರ ಕಳವು ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 15.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೊಡ್ಡತಾಂಡದ ದೇವರಾಜ್, ಭರತ್ ಹೆಚ್, ನಾಗರಾಜ ನಾಯ್ಕ ಹಾಗೂ ಕೃತ್ಯಕ್ಕೆ ಧನಸಹಾಯ ಮಾಡಿದ ಆರೋಪದ ಮೇರೆಗೆ ಧನರಾಜ್ ನಾಯ್ಕ್ ಯಾನೆ ಧನು ಎಂಬವರನ್ನು ಬಂಧಿಸಲಾಗಿದೆ. ಸುಮಾರು 50,000 ರೂ ಮೌಲ್ಯದ ಬೈಕ್ ಹಾಗೂ 2 ಆಂಡ್ರಾಯ್ಡ್ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ: ಆಗಸ್ಟ್ 4ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ವಿದ್ಯೋದಾಯ ಇಂಗ್ಲಿಷ್ ಮೀಡಿಯಂ ಶಾಲೆಯ ಎದುರುಗಡೆಯ ರಾಜಶ್ರೀ ಕಟ್ಟಡದಲ್ಲಿರುವ ದಿ ಸೌತ್ ಇಂಡಿಯನ್ ಬ್ಯಾಂಕ್‌ನ ಎಟಿಎಂ ಕಳವು ಯತ್ನ ನಡೆದಿತ್ತು. ಎಟಿಎಂನ ಮುಂಭಾಗದ ಗಾಜು ಒಡೆದು ಎಟಿಎಂ ಮಷಿನ್ ಕಳವು ಮಾಡಲು ಪ್ರಯತ್ನಿಸಿ ಕೆಳ ಮಹಡಿಗೆ ಬೀಳಿಸಿ ಆರೋಪಿಗಳು ಒಳ ನುಗ್ಗಿರುವುದು ಕಂಡುಬಂದಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸುರತ್ಕಲ್ ಪೊಲೀಸ್ ಪೊಲೀಸರು ತನಿಖೆಗೆ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಠಾಣೆಯ ಮತ್ತೊಬ್ಬರು ನಿರೀಕ್ಷಕ ರಘು ನಾಯ್ಕ, ಅರುಣ್ ಕುಮಾರ್ ಡಿ ಮತ್ತು ಎ.ಎಸ್.ಎ ರಾಧಾಕೃಷ್ಣ, ಹೆಚ್.ಸಿ.ಉಮೇಶ್ ಕೊಟ್ಟಾರಿ, ಹೆಚ್.ಸಿ.ಅಣ್ಣಪ್ಪ ಮಂಡ್ಯ, ಪಿ.ಸಿ. ಕಾರ್ತಿಕ್ ಕುಲಾಲ್, ಪಿಸಿ ಸುನಿಲದ ಕುಸುನಾಳ ಅವರಿದ್ದ ವಿಶೇಷ ತಂಡ ರಚಿಸಿಲಾಗಿತ್ತು.
ಘಟನೆ ನಡೆದ ದಿನ ಕೃತ್ಯಕ್ಕೆ ಬಳಸಲಾದ ಜೆಸಿಬಿಯನ್ನು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಕಡೆಯಿಂದ ಜೋಕಟ್ಟೆ ಕಡೆಗೆ ಹೋಗುವ ರಸ್ತೆ ಮಾರ್ಗದಲ್ಲಿ ಪತ್ತೆ ಮಾಡಲಾಗಿತ್ತು. ಇದರ ಮೌಲ್ಯ 15 ಲಕ್ಷ ರೂ. ಈ ಜೆಸಿಬಿಯನ್ನು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿತ್ತು. ಆರೋಪಿಗಳು ಜುಲೈ 21 ರಂದು ಸಮಯ 10:10 ರಿಂದ 10:30 ರ ಮಧ್ಯದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ವಿನೋಬಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಲಯ ದೇವಾಸ್ಥಾನದ ಎದುರು ರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಎಟಿಎಂ ಅನ್ನು ಜೆಸಿಬಿಯಿಂದ ಒಡೆಯಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆಗಸ್ಟ್ 4ರಂದು ಆರೋಪಿಗಳು ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ವಾಹನವನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಆ. 15 ರಂದು ಬಂಧಿಸಿ ಆ.16 ರಂದು ಒಂದನೇ ಹೆಚ್ಚುವರಿ ಸಿಜೆಎಮ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು 1 ರಿಂದ 3ನೇ ಆರೋಪಿಗಳಿಗೆ 4 ದಿನಗಳ ಪೊಲೀಸ್ ಕಸ್ಟಡಿ ಹಾಗೂ 4ನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಇದನ್ನೂ ಓದಿ : ಸರಗಳ್ಳತನ ಯಶಸ್ವಿಯಾಗಲೆಂದು ಮಲೆಮಹದೇಶ್ವರನಿಗೆ ಹರಕೆ! ಮುಡಿಕೊಟ್ಟು ಬರ್ತಿದ್ದಂತೆ ಪೊಲೀಸರ ದರ್ಶನ