ಕಡಬ(ದ.ಕ): ಕರ್ತವ್ಯನಿರತ ಕೊರೊನಾ ವಾರಿಯರ್ಸ್ಗೆ ಕೊರೊನಾ ಸೋಂಕಿತರೊಬ್ಬರು ಕರ್ತವ್ಯಕ್ಕೆ ಅಡ್ಡಿಪಡಿಸಿ ಬಳಿಕ ಪೊರಕೆಯಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಡಬ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕುಟ್ರುಪಾಡಿ ಗ್ರಾಮದ ಉಳಿಪ್ಪು ಭಾಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೀವಿ ಬಿ.ಎಸ್. ಎಂಬವರು ಹಲ್ಲೆಗೊಳಗಾದವರು. ಡಿ. 16ರಂದು ಉಳಿಪ್ಪು ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಿ. 21ರಂದು ಮನೆಗೆ ಭೇಟಿ ನೀಡಿದ್ದ ವೇಳೆ ಸೋಂಕಿತ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಪತ್ನಿ ಪೊರಕೆಯಿಂದ ಆಶಾ ಕಾರ್ಯಕರ್ತೆಗೆ ಯದ್ವಾತದ್ವಾ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ಕಡಬ ಆಸ್ಪತ್ರೆಯ ವೈದ್ಯಾಧಿಕಾರಿಗೆ ಮಾಹಿತಿ ಡಿ. 21ರಂದು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸೋಂಕಿತರ ಕ್ವಾರಂಟೈನ್ ಮುಗಿದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಕ್ವಾರಂಟೈನ್ ಅವಧಿ ಮುಗಿದು ಜಿನ್ನಪ್ಪ ಗೌಡರು ಹೊರಗಡೆ ತಿರುಗಾಡುತ್ತಿದ್ದು, ಪೊರಕೆಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ ಪ್ರಕರಣವಾದರೂ ಆಸ್ಪತ್ರೆಯಿಂದ ಆಗಲಿ, ಠಾಣೆಯಿಂದ ಆಗಲಿ ತನಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ಕರ್ತವ್ಯ ನಿರ್ವಹಿಸಲು ಮಾನಸಿಕ ವೇದನೆಯಿಂದ ಕಷ್ಟವಾಗುತ್ತಿದೆ. ಅಲ್ಲದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ರಾಜೀವಿ ದ.ಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ನಡುವೆ ಆಶಾ ಕಾರ್ಯಕರ್ತೆಗೆ ನ್ಯಾಯ ಒದಗಿಸದಿದ್ದಲ್ಲಿ ತಾವು ಕೆಲಸ ಬಿಟ್ಟು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಕಡಬ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಆಶಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.