ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸಲಾಗುತ್ತಿದೆ ಎಂದು ಶಂಕಿಸಿ, ವ್ಯಕ್ತಿವೋರ್ವನ ಮೇಲೆ ದುಷ್ಕರ್ಮಿಗಳ ಗುಂಪೊಂದು ತಲವಾರ್ನಿಂದ ದಾಳಿ ನಡೆಸಿರುವ ಘಟನೆ ನಗರದ ಕುಲಶೇಖರ ಸಿಲ್ವರ್‌ಗೇಟ್ ಬಳಿ ನಡೆದಿದೆ.
ಉಳಾಯಿಬೆಟ್ಟು ನಿವಾಸಿ ಉಮರ್ ಫಾರೂಕ್ (32) ಹಲ್ಲೆಗೊಳಗಾಗಿರುವ ವ್ಯಕ್ತಿ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಉಮರ್ ಫಾರೂಕ್ ಅವರು ಟೆಂಪೋ ಗೂಡ್ಸ್ ವಾಹನದಲ್ಲಿ ಮಾವಿನ ಹಣ್ಣು ತುಂಬಿಕೊಂಡು ಉಳಾಯಿಬೆಟ್ಟುವಿನಿಂದ ಮಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದರು. ಆದರೆ ವಾಹನವು ಕುಲಶೇಖರದ ಸಿಲ್ವರ್‌ಗೇಟ್ ಸಮೀಪಿಸುತ್ತಿದ್ದಂತೆ, ಒಂದೇ ಬೈಕ್‌ನಲ್ಲಿ ಆಗಮಿಸಿದ ಮೂವರು ಏಕಾಏಕಿ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು. ದುಷ್ಕರ್ಮಿಗಳು ವಾಹನದಲ್ಲಿ ಏನಿದೆ? ದನ ಸಾಗಿಸಲಾಗುತ್ತಿದಿಯಾ? ಎಂದು ಉಮರ್ ಫಾರೂಕ್‌ರನ್ನು ಪ್ರಶ್ನಿಸಿದ್ದಾರೆ. ಆಗ ವಾಹನದಲ್ಲಿ ಮಾವಿನಹಣ್ಣು ಸಾಗಿಸುತ್ತಿರುವುದಾಗಿ ಫಾರೂಕ್ ಉತ್ತರಿಸಿದ್ದಾರೆ.
ಈ ವೇಳೆ ಅವಾಚ್ಯ ಪದಗಳಿಂದ ನಿಂದಿಸಿ ಫಾರೂಕ್‌ರನ್ನು ಹಿಡಿದೆಳೆದಿದ್ದಾರೆ. ಪರಿಣಾಮ ಹೆದರಿದ ಟೆಂಪೊ ಚಾಲಕ ಅಶ್ಫಕ್ ಸ್ಥಳದಿಂದ ಓಡಿ ಹೋಗಿದ್ದಾರೆ. ಆಗ ದುಷ್ಕರ್ಮಿಗಳು ಉಮರ್ ಫಾರೂಕ್ ಮೇಲೆ ತಲವಾರು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಫಾರೂಕ್ ಅವರ ಕಾಲು, ಕೈ, ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮಂಗಳೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾವಿನಹಣ್ಣು ಲೋಡ್ ಮಾಡಿದ್ದ ವಾಹನವನ್ನು ಕಂಕನಾಡಿ ನಗರ ಠಾಣೆಗೆ ಕೊಂಡೊಯ್ಯಲಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.