ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿಯಲ್ಲಿ ಹಲ್ಲೆಗೊಳಗಾಗಿದ್ದ ಕಾಂಗ್ರೆಸ್ ಕಾರ್ಯಕರ್ತ, ದಲಿತ ಸಮುದಾಯದ ಯುವಕ ಶುಕ್ರವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಿನೇಶ್ ಮೃತ ವ್ಯಕ್ತಿ. ಈ ಬಗ್ಗೆ ಮೃತನ ತಾಯಿ ತನ್ನ ಮಗನ ಕೊಲೆ ಮಾಡಲಾಗಿದೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ: ಧರ್ಮಸ್ಥಳ ಸಮೀಪದ ಕನ್ಯಾಡಿ ಎಂಬಲ್ಲಿ ಫೆಬ್ರವರಿ 23 ರಂದು ಮಧ್ಯಾಹ್ನ 11 ಗಂಟೆ ಸುಮಾರಿಗೆ ದಿನೇಶ್ ಎಂಬುವರಿಗೆ ಕನ್ಯಾಡಿಯಲ್ಲಿ ಅಂಗಡಿ ಹೊಂದಿರುವ ಕಿಟ್ಟ ಯಾನೆ ಕೃಷ್ಣ ಎಂಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿರುತ್ತಾನೆ. ಈ ಬಗ್ಗೆ ಹಲ್ಲೆಗೊಳಗಾದ ದಿನೇಶ್ ಮನೆಗೆ ಹೋಗಿ ತನ್ನ ತಾಯಿ ಹಾಗೂ ಹೆಂಡತಿಯಲ್ಲಿ ನನಗೆ ಕೃಷ್ಣ ಹೊಟ್ಟೆಗೆ ಹೊಡೆದಿದ್ದಾನೆ. ವಿಪರೀತ ಹೊಟ್ಟೆ ನೋವಾಗುತ್ತಿದೆ ಎಂದಿದ್ದಾನೆ.
ಫೆಬ್ರವರಿ 24ರ ಬೆಳಗ್ಗೆ ಕೃಷ್ಣನ ಬಳಿ ಹೋದ ಮೃತನ ತಾಯಿ ನನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಕೃಷ್ಣನಲ್ಲಿ ಹೇಳಿದಾಗ ಅವನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನೇಶ್ ಫೆ. 25 ರಂದು ಮೃತಪಟ್ಟಿದ್ದಾನೆ.
ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮೃತನ ತಾಯಿ ಮಗನಿಗೆ ಕಿಟ್ಟ ಯಾನೆ ಕೃಷ್ಣ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದರಿಂದ ಅವನು ಮೃತಪಟ್ಟಿದ್ದಾನೆ. ಆದ್ದರಿಂದ, ಇದು ಕೊಲೆ ಎಂದು ದೂರು ನೀಡಿದ್ದಾರೆ.
ಓದಿ: ಜಾತಿ ಪದ್ಧತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ : ಬಿ.ಕೆ.ಹರಿಪ್ರಸಾದ್