ಸುಬ್ರಹ್ಮಣ್ಯ : ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸೆ.24ರಿಂದ ಆಶ್ಲೇಷ ಸೇವೆಗಳನ್ನು ಹೆಚ್ಚಳಗೊಳಿಸಲಾಗುತ್ತಿದೆ. ಸಂಜೆಯೂ ಆಶ್ಲೇಷ ಸೇವೆ ಆರಂಭಿಸಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳೂ ಆದ ರೂಪಾ ಎಂ ಜೆ ತಿಳಿಸಿದ್ದಾರೆ.
ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24ರಿಂದ ಬೆಳಗ್ಗೆ ಎರಡು ಹಂತದಲ್ಲಿ ತಲಾ 75ರಂತೆ 150 ಹಾಗೂ ಸಂಜೆ 75ರಂತೆ ದಿನವೊಂದಕ್ಕೆ 225 ಸೇವೆ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಭಾನುವಾರ ಮತ್ತು ಆಶ್ಲೇಷ ನಕ್ಷತ್ರದಂತಹ ವಿಶೇಷ ದಿನಗಳಲ್ಲಿ 75ರ ಬದಲು ತಲಾ 100 ಪೂಜೆ ನೆರವೇರಿಸಲಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸೇವೆ ನಡೆಸುವಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಮತ್ತು ಸದ್ಯ ಸಣ್ಣ ಮಕ್ಕಳಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗುತ್ತಿಲ್ಲ ಎಂದು ಅವರು ಹೇಳಿದರು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ ಹೆಚ್ ಉಪಸ್ಥಿತರಿದ್ದರು. ನಂತರದಲ್ಲಿ ಆಡಳಿತಾಧಿಕಾರಿಗಳು ದೇಗುಲದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.