ಮಂಗಳೂರು: ಇಲ್ಲಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಮೋಜು-ಮಸ್ತಿ, ಪಾರ್ಟಿ ಮಾಡುವ ಜನರಿಗೆ ಎಚ್ಚರಿಕೆ ಗಂಟೆಯಂತಿದೆ. ಏಕೆಂದರೆ ಇಲ್ಲಿ ನೆರಮನೆಯ ಯುವಕನನ್ನು ಪಾರ್ಟಿ ನೆಪದಲ್ಲಿ ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ನಗರದ ಅಪಾರ್ಟ್ ಮೆಂಟ್ವೊಂದರಲ್ಲಿ ವಾಸವಿದ್ದ ಅಝ್ವೀನ್ ಸಿ ಎಂ (24) ಮತ್ತು ಹತೀಜಮ್ಮ ಯಾನೆ ಸಪ್ನಾ (23) ಬಂಧಿತರು. ಈ ಇಬ್ಬರು ಕೇರಳ ಮೂಲದವರಾಗಿದ್ದು, ಇಂತಹ ಕೃತ್ಯಕ್ಕೆಂದೆ ಇಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.
ದಂಪತಿ ಅಲ್ಲದ ಈ ಜೋಡಿ ನೆರೆಮನೆಯ ಯುವಕನ ಮನೆಗೆ ಜುಲೈ 19 ರಂದು ಬಂದು ಪಾರ್ಟಿ ಮಾಡೋಣ ಎಂದು ಹೇಳಿದ್ದಾರೆ. ಯುವಕ ಅದಕ್ಕೆ ಒಪ್ಪಿದ್ದಾನೆ. ಇದನ್ನೇ ಕಾಯುತ್ತಿದ್ದ ಜೋಡಿ, ಅಮಲು ಪದಾರ್ಥವನ್ನು ಜ್ಯೂಸ್ ನೊಂದಿಗೆ ಮಿಕ್ಸ್ ಮಾಡಿ ಯುವಕನಿಗೆ ಕೊಟ್ಟಿದ್ದಾರೆ.
ಜ್ಯೂಸ್ ಕುಡಿಯುತ್ತಿದ್ದಂತೆ ಮೂರ್ಚೆ ತಪ್ಪಿದ ಯುವಕ ಎಚ್ಚರಗೊಂಡಾಗ ವಿವಸ್ತ್ರನಾಗಿದ್ದಾನೆ. ಹಾಗೆ ಆತನ ಕೈಯಲ್ಲಿದ್ದ ನವರತ್ನದ ರಿಂಗ್ ಮತ್ತು ಕಪಾಟಿನಲ್ಲಿದ್ದ 2.12 ಲಕ್ಷ ರೂ ಮಂಗಮಾಯವಾಗಿದೆ. ಮರುದಿನ ಜೋಡಿಯ ಮನೆಗೆ ಕೇಳಲು ಹೋದಾಗ ಹಣ ತೆಗೆದುಕೊಂಡಿಲ್ಲ ಎಂದಿದ್ದಾರೆ. ಇದನ್ನು ನಂಬದ ಯುವಕ ಪೊಲೀಸ್ನವರಿಗೆ ತಿಳಿಸುತ್ತೇನೆ ಎಂದಾಗ ನಾಳೆ ನಿಮ್ಮ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇದಾದ ನಂತರ ಈ ಜೋಡಿ ಆತನ ಮನೆಗೆ ಬಂದು ಅವರ ಮೊಬೈಲ್ ನಲ್ಲಿದ್ದ ಯುವಕನ ನಗ್ನ ಫೋಟೋ ಮತ್ತು ವಿಡಿಯೋ ತೋರಿಸಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗ ನಮ್ಮ ಬಳಿ ಇರುವ ನಿನ್ನ ಹಣ ಕೇಳಿದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುವುದು, ಅತ್ಯಾಚಾರಕ್ಕೆ ಪ್ರಯತ್ನಿಸಿದ ದೂರು ನೀಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ತಬ್ಬಿಬ್ಬಾದ ಯುವಕ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.