ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಠಾಣೆಯ ಪೊಲೀಸರು 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ನಿವಾಸಿಗಳಾದ ಶಫೀಕ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ. ಆರೋಪಿಗಳು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಅಕ್ರಮವಾಗಿ ಮೆಲ್ಕಾರ್, ಮುಡಿಪು, ನಾಟೆಕಲ್ ದಾರಿಯಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಸರಿಯಾದ ಮಾಹಿತಿ ಮೇರೆಗೆ ಕೊಣಾಜೆ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ್ ಬಿರಾದರ್ ಹಾಗೂ ತಂಡ ಮಂಜನಾಡಿ ಗ್ರಾಮದ ನಾಟೆಕಲ್, ವಿಜಯನಗರ ಎಂಬಲ್ಲಿ ಆರೋಪಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ತಕ್ಷಣ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 5 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಓದಿ: ಬಿಜೆಪಿ ಹೈಕಮಾಂಡ್ ಮಠಾಧೀಶರ ಮಾತು ಕೇಳಿ ನಿರ್ಣಯ ಮಾಡೋರಲ್ಲ : ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ