ಮಂಗಳೂರು; ಮಂಗಳೂರಿನ ಮೊಬೈಲ್ ಶೋರೂಂನಲ್ಲಿ 68 ಆ್ಯಪಲ್ ಫೋನ್ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 41ಲಕ್ಷ ರೂ ಮೌಲ್ಯದ 40 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಲಾಕ್ಡೌನ್ ಸಂದರ್ಭ ಅಂಗಡಿ ಬಂದ್ ಮಾಡಿದ್ದ ವೇಳೆ 'ಮ್ಯಾಪಲ್' ಶೋರೂಂನಲ್ಲಿ ಮೊಬೈಲ್ ಫೋನ್ಗಳ ಕಳ್ಳತನವಾಗಿತ್ತು. ಶೋರೂಂನ ಹಿಂಬದಿಯಲ್ಲಿ ಇರುವ ಮೂರು ಸರಳುಗಳನ್ನು ಕತ್ತರಿಸಿ 68 ಮೊಬೈಲ್ ಫೋನ್ಗಳು ಮತ್ತು 1.15 ಲಕ್ಷ ರೂ. ನಗದನ್ನು ಕಳ್ಳತನ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದವನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆ ವ್ಯಾಪ್ತಿಯ ನಿವಾಸಿ ವಿನೋದ್ ಸಿಂಗ್ ಯಾನೆ ವಿಜಯ್ ಶೆಟ್ಟಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿಯಿಂದ 41 ಆ್ಯಪಲ್ ಫೋನ್ಸ್ ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ.
ಕಳವು ಮಾಡಿದ ಅಂಗಡಿಗೆ 3 ದಿನದ ಮೊದಲು ಬಂದಿದ್ದ ಕಳ್ಳರು!
ಮ್ಯಾಪೆಲ್ ಶೋರೂಂನಲ್ಲಿ ಕಳವು ಮಾಡುವ ಮೂರು ದಿನಕ್ಕೆ ಮುಂಚೆ ಆರೋಪಿಗಳಿಬ್ಬರು ಈ ಶೋರೂಂಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಮುಂಬೈನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಇವರು, ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಲು ಸರ್ವೆ ಮಾಡಿದ್ದರು. 6 ಮೊಬೈಲ್ ಅಂಗಡಿಗಳನ್ನು ಗುರುತಿಸಿ, ಮ್ಯಾಪೆಲ್ ಶೂರೂಂನಲ್ಲಿ ಕಳವು ಮಾಡಲು ನಿರ್ಧರಿಸಿದ್ದರು.
ಮ್ಯಾಪೆಲ್ ಶೋರೂಂಗೆ ಗ್ರಾಹಕರಂತೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದರು. ವಾಷ್ ರೂಂ ಒಳಗೂ ಹೋಗಿ ಪರಿಶೀಲನೆ ನಡೆಸಿದ್ದರು. ಕೊನೆಗೆ ಮ್ಯಾಪೆಲ್ ಶೋರೂಂ ನಲ್ಲಿ ಕಳ್ಳತನ ಮಾಡಲು ಫಿಕ್ಸ್ ಆಗಿದ್ದರು. ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ:ಅಂಚೆ ಕಚೇರಿ ಮೇಲೆ ಧ್ವಜ ಇರಿಸುವ ವೇಳೆ ಮುರಿದು ಬಿದ್ದ ಕ್ರೇನ್: ಮೂವರ ದುರ್ಮರಣ