ಮಂಗಳೂರು: ನಗರದ ಹೊರವಲಯದ ಬಜ್ಪೆಯಲ್ಲಿ ಇಬ್ಬರು ಯುವಕರ ಮೇಲೆ ತಂಡವೊಂದು ದಾಳಿ ಮಾಡಿ ಒಬ್ಬನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 4ಕ್ಕೆ ಏರಿದೆ.
ಕೈಕಂಬದ ಪುನೀತ್ ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಬಜ್ಪೆ ಕಳವಾರು ನಿವಾಸಿ ಪ್ರಶಾಂತ್ ಯಾನೆ ಪಚ್ಚು, ಧನರಾಜ್, ಯಜ್ಞೆಶ್ ಎಂಬುವರನ್ನು ಈ ಹಿಂದೆ ಬಂಧಿಸಲಾಗಿತ್ತು. ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಸಫ್ವಾನ್ ಮತ್ತು ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಸ್ತಿ ಬಳಿ ಅಡ್ಡಗಟ್ಟಿದ ತಂಡ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಿದ್ದರು.
ಬಜಪೆ ಪೊರ್ಕೊಡಿಯಲ್ಲಿ ಚಿನ್ನಾಭರಣ ಕಳವು ಪ್ರಕರಣ-ಆರೋಪಿ ಬಂಧನ: ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಕರೋಡಿ ಎಂಬಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿಸೋಜಾ ಬಂಧಿತ ಆರೋಪಿ. ಸೆಪ್ಟೆಂಬರ್ 1 ರಂದು ಕರೋಡಿಯ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್ನ್ನು ಮುರಿದು ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಅವರ ತಂಡ ಬಂಧಿಸಿದೆ.
ಬಂಧಿತನಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳಾದ ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಹರಳುಗಳಿಂದ ಕೂಡಿರುವ ಚಿನ್ನದ ನೆಕ್ಲೆಸ್, 2 ಚಿನ್ನದ ಬಳೆಗಳು, 3 ಚಿನ್ನದ ಉಂಗುರಗಳು, ಒಂದು ಜೊತೆ ಚಿನ್ನದ ಕಿವಿ ಒಲೆ ಮತ್ತು ಒಂದು ಜೊತೆ ಚಿನ್ನದ ಜುಮುಕಿಯನ್ನು ವಶಪಡಿಸಿಕೊಳ್ಳಲಾಗಿದೆ.
14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ: ಪ್ರಕರಣವೊಂದರಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ 14 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ರಾಜೇಶ ಬಂಧಿತ ಆರೋಪಿ. ಈತನನ್ನು ಕಾಸರಗೋಡಿನಲ್ಲಿ ಎಎಸ್ಐ ಓಂ ದಾಸ್ ಹಾಗೂ ಹೆಚ್ಸಿ ಮಚ್ಚೆಂದ್ರನಾಥ್ ರವರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ತನಕ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿಯನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರದೊಯ್ಯಲಾಗಿದೆ.
ತುಳು ಚಿತ್ರನಿರ್ಮಾಪಕ ದೇವದಾಸ್ ಪಾಂಡೇಶ್ವರ ನಿಧನ: ತುಳು ಚಲಚಿತ್ರದ ನಿರ್ಮಾಪಕರಾದ ದೇವದಾಸ್ (ದೇವು ) ಪಾಂಡೇಶ್ವರ ರವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ. ತುಳು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದ ದೇವದಾಸ್ ರವರು ಪಾಂಡೇಶ್ವರದಲ್ಲಿ ಶ್ರೀ ಕಟೀಲೇಶ್ವರಿ ಫೈನಾನ್ಸ್ ಉದ್ಯಮ ಹೊಂದಿದ್ದರು. ಅವರು ಹತ್ತು ವರ್ಷಗಳ ಹಿಂದೆ ರಂಗ್ ಎಂಬ ತುಳು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಕದ್ರಿ ದೇವಸ್ಥಾನದ ಆಡಳಿತ ಸಮೀತಿಯಲ್ಲಿ ಸದಸ್ಯರಾಗಿದ್ದ ಅವರು ಸಮಾಜ ಸೇವಕರಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ: ಚಾಮರಾಜನಗರ: 44 ಪ್ರಕರಣ ಭೇದಿಸಿ 1.34 ಕೋಟಿ ಚಿನ್ನಾಭರಣ ಹಿಂತಿರುಗಿಸಿದ ಗಡಿಜಿಲ್ಲೆ ಪೊಲೀಸರು