ಬೆಳ್ತಂಗಡಿ(ದಕ್ಷಿಣ ಕನ್ನಡ): ತೆಕ್ಕಾರು ಗ್ರಾಮ ಬಟ್ರಬೈಲು ಎಂಬಲ್ಲಿ ಜಮೀನೊಂದರಲ್ಲಿ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಇದು ಸುಮಾರು 800 ವರ್ಷಗಳ ಹಿಂದೆ ಇದ್ದ ಗೋಪಾಲಕೃಷ್ಣ ದೇವಸ್ಥಾನದ ಪಳೆಯುಳಿಕೆ ಎಂದು ಹೇಳಲಾಗುತ್ತಿದೆ.
ದೇವಸ್ಥಾನದ ಪಳೆಯುಳಿಕೆ ದೊರಕಿರುವ ಈ ಭೂಮಿ ಈ ಹಿಂದೆ ಸ್ಥಳೀಯ ವ್ಯಕ್ತಿಯೋರ್ವರ ವಶದಲ್ಲಿತ್ತು. ಈ ಭೂಮಿಯನ್ನು ಬಿಟ್ಟುಕೊಡುವಂತೆ ಸ್ಥಳೀಯರು ನಿರಂತರ ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಈ ಸ್ಥಳದ ಸರ್ವೆ ಮಾಡಿಸಿದ್ದರು. ಸರ್ವೆಯಲ್ಲಿ ಇದು ಸರ್ಕಾರಿ ಭೂಮಿ ಎನ್ನುವುದು ತಿಳಿದುಬಂದಿತ್ತು.
25 ಸೆಂಟ್ಸ್ ಇರುವ ಈ ಭೂಮಿಯನ್ನು ಶಾಸಕರು ಧಾರ್ಮಿಕ ದತ್ತಿ ಇಲಾಖೆಯ ಹೆಸರಿಗೆ ದಾಖಲೆ ಮಾಡಿಕೊಂಡಿದ್ದರು. ಬಳಿಕ ಈ ಭೂಮಿಯಲ್ಲಿ ಉತ್ಖನನ ನಡೆಸಿದಾಗ ಅಲ್ಲಿನ ಬಾವಿಯೊಳಗೆ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಇದು ಸುಮಾರು 12ನೇ ಶತಮಾನದ ಕಲ್ಲಿನ ವಿಗ್ರಹ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಇದರ ಪ್ರಾಚೀನತೆಯ ಬಗ್ಗೆ ಪುರಾತತ್ವ ಇಲಾಖೆಯೇ ಹೇಳಬೇಕು. ಇದೀಗ ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಸ್ಥಳೀಯರು ಸಿದ್ಧತೆ ನಡೆಸುತ್ತಿದ್ದಾರೆ.
ಇತ್ತೀಚಿನ ಘಟನೆಗಳು: ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ಪ್ರಾಚೀನ ಕಾಲದ ಗಣೇಶನ ವಿಗ್ರಹ ಪತ್ತೆಯಾಗಿತ್ತು. ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು. ಇನ್ನಷ್ಟು ಪುರಾವೆಗಳು ಅಲ್ಲಿ ಲಭ್ಯವಾಗಬಹುದು ಎಂದು ಅಲ್ಲಿಯ ಹಿರಿಯರು ತಿಳಿಸಿದ್ದರು. ವಿಗ್ರಹ ಪತ್ತೆಯಾಗಿರುವ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಭೂಮಿಯನ್ನು ಅಗೆಯುವ ವೇಳೆ ಈ ವಿಗ್ರಹ ಪತ್ತೆಯಾಗಿತ್ತು.
ಚೆನ್ನಕೇಶವಸ್ವಾಮಿ ವಿಗ್ರಹ ಪತ್ತೆ: ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ದಡದಲ್ಲಿ ಮರಳು ಗಣಿಗಾರಿಕೆ ಮಾಡುವಾಗ ಐತಿಹಾಸಿಕ ಚನ್ನಕೇಶವಸ್ವಾಮಿಯ ವಿಗ್ರಹ ಈ ಹಿಂದೆ ಪತ್ತೆಯಾಗಿತ್ತು. ಪತ್ತೆಯಾಗಿರುವ ಐತಿಹಾಸಿಕ ವಿಗ್ರಹ ಸುಮಾರು 4ರಿಂದ 4.5ಅಡಿಯಷ್ಟು ಎತ್ತರವಾಗಿದೆ. ಸಾವಿರಾರು ವರ್ಷಗಳ ಕಾಲದಿಂದ ಈ ವಿಗ್ರಹ ಹೇಮಾವತಿ ದಂಡೆಯಲ್ಲಿರುವ ಮರಳಿನ ಅಡಿಯಲ್ಲಿಯೇ ಇತ್ತು ಎಂದು ಹೇಳಲಾಗಿದೆ.
ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಭೂಮಿ ಅಗೆಯುವಾಗ ವಿಗ್ರಹ ಪತ್ತೆಯಾಗಿತ್ತು. ಪತ್ತೆಯಾದ ವಿಗ್ರಹವನ್ನು ಚೋವೀಸ್ ತೀರ್ಥಂಕರರ ವಿಗ್ರಹ ಎಂದು ಗುರುತಿಸಲಾಗಿತ್ತು. ಜೆಸಿಬಿಯಿಂದ ನೆಲ ಅಗೆಯುತ್ತಿದ್ದಾಗ ಸುಮಾರು 10 ಅಡಿ ಆಳದಲ್ಲಿ ಈ ವಿಗ್ರಹ ಪತ್ತೆಯಾಗಿತ್ತು. ಇದು ಸುಮಾರು 8ನೇ ಶತಮಾನದಷ್ಟು ಹಿಂದಿನದ್ದು ಇರಬಹುದೆಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ: ವೇದಾವತಿ ನದಿಯಲ್ಲಿ ಪುರಾತನ ಶ್ರೀರಾಮನ ವಿಗ್ರಹ ಪತ್ತೆ