ಮಂಗಳೂರು: ಮಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಕುಸಿತ ಆಗಿ ಶತಮಾನದ ಹಿಂದಿನ ಬಾವಿ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಮಂಗಳೂರಿನ ಬೋಳಾರದಲ್ಲಿರುವ ಲೀವೆಲ್ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ. ದಶಕಗಳ ಹಿಂದೆ ಇಲ್ಲಿ ಬಾವಿಯನ್ನು ಮುಚ್ಚಲಾಗಿತ್ತು.ಅದರ ಮೇಲೆ ಇದ್ದ ರಸ್ತೆ ನಿನ್ನೆ ಕುಸಿದು ಈ ಬಾವಿ ಪ್ರತ್ಯಕ್ಷವಾಗಿದೆ. ಈ ಬಾವಿ ಶತಮಾನಗಳ ಹಿಂದಿನದಾಗಿದ್ದು ಲೀ ಎಂಬವರು ಇದನ್ನು ನಿರ್ಮಿಸಿದ್ದರು. ಆ ಕಾರಣಕ್ಕಾಗಿ ಆ ಪ್ರದೇಶಕ್ಕೆ ಲೀವೆಲ್ ಎಂದು ಹೆಸರು ಬಂದಿತ್ತು. ಬಾವಿ ಬಾಯ್ದೆರೆದ ಕಾರಣ ಸಂಚಾರಕ್ಕೆ ತೊಡಕುಂಟಾಗುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನ ಸೆಳೆದಿದ್ದು, ಅದರಂತೆ ಸಂಚಾರ ಪೊಲೀಸರು ಬ್ಯಾರಿಕೇಡ್ ಅಡ್ಡವಿಟ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.
ಇಲ್ಲಿ ರಸ್ತೆ ನಿರ್ಮಿಸುವಾಗ ಬಾವಿಗೆ ಮಣ್ಣು ತುಂಬಿಸದೆ ಮೇಲೆ ಕಲ್ಲು ಚಪ್ಪಡಿ ಹಾಕಿ ಮಣ್ಣು ತುಂಬಿಸಿ ಡಾಂಬರೀಕರಣ ಮಾಡಲಾಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬಾವಿಯು ಬಾಯ್ದೆರೆದಿದೆ. ಅಲ್ಲದೆ ಎರಡು ಅಡಿ ಅಗಲದ ಸುತ್ತಳತೆಯಲ್ಲಿ ಡಾಂಬರು ರಸ್ತೆ ಕುಸಿತ ಕಂಡಿದೆ.