ಪುತ್ತೂರು(ದ.ಕ): ತಾಲೂಕಿನ ಬಜತ್ತೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ 18.55 ಕೋ.ರೂ. ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ತಾ.ಪಂ ಸಭಾಂಗಣದಲ್ಲಿ ಅವರು ತಾಲೂಕಿಗೆ ಮಂಜೂರಾದ ವಿವಿಧ ಅನುದಾನಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಗೋವಿಂದ ಕಾರಜೋಳ ಅವರ ಶಿಫಾರಸಿನ ಮೇರೆಗೆ ಅನುದಾನ ಮಂಜೂರಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ಕೃಷಿ ಇಲಾಖೆಯ ಆರ್‌ಐಡಿಎಫ್-23 ಹಾಗೂ ಆರ್‌ಕೆವಿವೈ ಯೋಜನೆಯಡಿ ತಲಾ 50 ಲಕ್ಷ ರೂ.ನಂತೆ ಒಟ್ಟು 1.50 ಕೋ.ರೂ.ಅನುದಾನ ಬಿಡುಗಡೆಗೊಂಡಿದೆ ಎಂದರು. ಕೇಂದ್ರ ಸರಕಾರದ ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮದಡಿ ವಸತಿ ಶಾಲೆ, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್, ಹುನಾರ್ ಹಬ್, ಸದ್ಭಾವ್ ಮಂಟಪ್, ನಗರಸಭೆ ವ್ಯಾಪ್ತಿಯಲ್ಲಿ ಮಾರುಕಟ್ಟೆ ಶೆಡ್ ನಿರ್ಮಾಣಕ್ಕೆ ಸ್ಥಳ ಕಾದಿರಿಸಲು ಒಪ್ಪಿಗೆ ದೊರೆತಿದ್ದು, ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳಿಗೆ ಸ್ಥಳ ಗುರುತಿಗೆ ಸೂಚನೆ ನೀಡಲಾಗುವುದು. ಸ್ಥಳ ಅಂತಿಮಗೊಂಡ ಬಳಿಕ ಅನುದಾನ ಮಂಜೂರಾಗಲಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಕೊರೊನಾ ಕಾರಣದಿಂದ ನಗರ ಪ್ರದೇಶಕ್ಕೆ ತೆರಳಿರುವವರ ಉದ್ಯೋಗಕ್ಕೆ ತೊಂದರೆ ಉಂಟಾಗಿರುವ ಕಾರಣದಿಂದ ಪುತ್ತೂರಿನಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಸಲುವಾಗಿ ಬೆಂಗಳೂರಿನಲ್ಲಿನ ಕೆಲ ಗಾರ್ಮೆಂಟ್ಸ್ ಮತ್ತು ಬಿಲ್ಡರ್ಸ್ ಜತೆ ಮಾತುಕತೆ ನಡೆಸಲಾಗಿದೆ. ಇಲ್ಲಿ 24 ತಾಸು ವಿದ್ಯುತ್, ನೀರು, ಭೂಮಿ ಒದಗಿಸಬೇಕಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದ್ದು, ಐಟಿಐ ಶಿಕ್ಷಣ ಪಡೆದವರಿಗೆ ಉದ್ಯೋಗ ಒದಗಿಸುವ ಭರವಸೆ ದೊರೆತಿದೆ. ಪುತ್ತೂರನ್ನು ಕೈಗಾರಿಕಾ ವಲಯವನ್ನಾಗಿ ರೂಪಿಸುವಲ್ಲಿ ಪ್ರಯತ್ನ ನಡೆಯುತ್ತಿದೆ. ಕೌಡಿಚ್ಚಾರಿನಲ್ಲಿ ನಾಲ್ಕು ಎಕರೆ ಜಾಗ ಮೀಸಲಿರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಇದ್ದರು.