ಮಂಗಳೂರು: ಬೆಂಗಳೂರಿನ ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕುದುರೆಮುಖ ಅದಿರು ಸಂಸ್ಥೆಯ ನೌಕರರ ವೇತನ ಒಪ್ಪಂದದ ಒಡಂಬಡಿಕೆಗೆ ತ್ರಿಪಕ್ಷೀಯ ಸಹಿಮಾಡಲಾಯಿತು.
2017ರಿಂದ ನೆನೆಗುದಿಗೆ ಬಿದ್ದಿದ್ದ ಈ ಒಪ್ಪಂದದಿಂದಾಗಿ ಈಗ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರು ಮತ್ತು 2017ರ ನಂತರ ನಿವೃತ್ತಿ ಹೊಂದಿದ್ದ ಕಾರ್ಮಿಕರು ವೇತನ ಹೆಚ್ಚಳದ ಪ್ರಯೋಜನ ಪಡೆಯಲ್ಲಿದ್ದಾರೆ. ಈ ಒಪ್ಪಂದ ಸಲೀಸಾಗಿ ನಡೆಯುವಂತೆ ದ.ಕ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಷಿ, ಶಾಸಕ ಡಾ.ವೈ ಭರತ ಶೆಟ್ಟಿ ಸಹಕರಿಸಿದರು.
ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಪ್ರಕಾಶ್ ಪಿ.ಎಸ್ ಮಾರ್ಗದರ್ಶನ ನೀಡಿದ್ದರು. ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿಸಲ್ಪಟ್ಟ ಕುದುರೆಮುಖ ಮಜ್ದೂರ್ ಸಂಘದ ಪ್ರದಾನ ಕಾರ್ಯದರ್ಶಿ ಸುರೇಶ್ ಕರ್ಕೇರ ಒಪ್ಪಂದದ ನೇತೃತ್ವ ವಹಿಸಿದ್ದರು. ಕೆಆರ್ ಚಂದ್ರೇಗೌಡ , ಖಜಾಂಚಿ ಉದಯಕುಮಾರ್ ಬಿಸಿಕೆ ಎಂಸಿ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
ದೆಹಲಿಯಲ್ಲಿ ಭಾರತೀಯ ಮಜ್ದೂರ್ ಸಂಘದ ಕೇಂದ್ರ ಉಕ್ಕು ವಿಭಾಗದ ಪ್ರಭಾರಿ ದೇವೇಂದ್ರ ಪಾಂಡೆ ಅವರು ಉಕ್ಕು ಸಚಿವಾಲಯದೊಂದಿಗೆ ಸತತ ಸಂಪರ್ಕದಲ್ಲಿದ್ದು ಒಪ್ಪಂದ ಸುಗಮವಾಗಿ ನಡೆಯುವಂತೆ ಸಹಕರಿಸಿದರು. ಕುದುರೆ ಮುಖ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಿವಿಧ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಕುದುರೆಮುಖ ಮಜ್ದೂರ್ ಸಂಘದ ವಿವಿಧ ವಿಭಾಗಗಳ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.