ಬಂಟ್ವಾಳ: ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಆರೋಪ ಪ್ರಕರಣ ಕಾವೇರುತ್ತಿದ್ದಂತೆಯೇ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಳವಾರ ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯಿಂದ ವಿಟ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷವನ್ನು ವರ ಧರಿಸಿದ್ದ ಎನ್ನಲಾಗ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: 'ಅವರನ್ನು ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ': ಕೊರಗಜ್ಜ ದೈವದ ನುಡಿ
ಮಂಗಲ್ಪಡಿ ನಿವಾಸಿ, ಅಹ್ಮದ್ ಮುಜಿತಾಬು (28), ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಬಂಧಿತರು.
ವಿಟ್ಲ ಪೇಟೆ ಬಂದ್:
ಹಿಂದೂ ಜಾಗರಣಾ ವೇದಿಕೆ ಕರೆ ನೀಡಿದ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆ ಬಂದ್ಗೆ ಬಹುತೇಕ ಅಂಗಡಿ ಮಾಲೀಕರು ಬೆಂಬಲ ಸೂಚಿಸಿದ್ದು, ಘಟನೆಯನ್ನು ಖಂಡಿಸಿ ವಿಟ್ಲದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಂದಿನವರೆಗೂ ಆರೋಪಿಗಳನ್ನು ಬಂಧಿಸಲು ತಡ ಮಾಡಿದ ಕಾರಣ ಬಂದ್ಗೆ ಕರೆ ನೀಡಲಾಗಿತ್ತು.