ಮಂಗಳೂರು : ಕೇರಳದಲ್ಲಿ ಭೀಕರ ಸ್ಫೋಟ ಸಂಭವಿಸಿರುವುದರಿಂದ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಇರಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿ ಭಾಗದಲ್ಲಿ ಭದ್ರತೆ, ನಿಗಾ ಹೆಚ್ಚಿಸಲಾಗುವುದು. ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು ಮಂಗಳೂರಿನಲ್ಲಿ ಬೆದರಿಕೆ ಹಿನ್ನೆಲೆಯಲ್ಲಿ ಈ ಮೂರೂ ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನು ತೆಗೆದುಕೊಂಡಿದ್ದೇವೆ ಎಂದರು.
ಸೈಬರ್ ಕ್ರೈಮ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸುತ್ತಿದ್ದೇವೆ. ಅದನ್ನು ನ್ಯಾಷನಲ್, ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ನಲ್ಲಿ ಕೊಂಡೊಯ್ಯಲು ಕ್ರಮ ವಹಿಸುತ್ತಿದ್ದೇವೆ ಎಂದ ಪರಮೇಶ್ವರ್ಗೆ, ಪಿಎಸ್ಐ ಹಗರಣ ಬಳಿಕ ಪೊಲೀಸ್ ಇಲಾಖೆ ನೇಮಕಾತಿ ಆಗುತ್ತಿಲ್ಲ ಎಂಬ ಪ್ರಶ್ನೆ ಕೇಳಿದಾಗ ಸರ್ಕಾರದ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ಪರೀಕ್ಷೆ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಬೇಕೆಂಬ ಬಗ್ಗೆ ಹೇಳಿದ್ದೇವೆ ಎಂದು ಮಾಹಿತಿ ನೀಡಿದರು.
ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಹೆಸರಲ್ಲಿ ವಂಚನೆ ಪ್ರಕರಣದ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು, ಅದನ್ನು ನಮ್ಮ ಎಸ್ಪಿ ಲೆವೆಲ್ ನಲ್ಲಿಯೇ ತನಿಖೆ ಮಾಡುತ್ತೇವೆ. ನಮ್ಮ ಪೊಲೀಸರು ಸಮರ್ಥರಿದ್ದು, ತನಿಖೆ ಮಾಡುತ್ತಾರೆ ಎಂದರು.
ತನಿಖೆ ನಡೆಸುವಂತೆ ಎನ್ಐಎಗೆ ಅಮಿತ್ ಶಾ ಸೂಚನೆ: ಇನ್ನೊಂದೆಡೆ ಘಟನೆ ನಂತರ ರಾಜ್ಯದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸುವಂತೆ ಗೃಹ ಸಚಿವರು, ಎನ್ಐಎ ಮತ್ತು ಎನ್ಎಸ್ಜಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಬಯೋಮೆಟ್ರಿಕ್ ಕಡ್ಡಾಯ, ಕಚೇರಿ ಸಮಯದಲ್ಲಿ ಹೊರಗೆ ಟೀ/ಕಾಫಿಗೆ ನಿರ್ಬಂಧ: ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಿದ ಮಂಡ್ಯ ಡಿಸಿ