ಸುಳ್ಯ/ದಕ್ಷಿಣ ಕನ್ನಡ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿಡತೆ ಹಿಂಡು ಕಂಡು ಬಂದ ಸ್ಥಳಕ್ಕೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಣಾಜೆ ಕಾಡಂಚಿನ ಪ್ರದೇಶದಲ್ಲಿರುವ ರೆಂಜಿಲಾಡಿ ಹೇರ ನಿವಾಸಿ ಆನಂದ ಎಂಬುವರ ತೋಟದಲ್ಲಿ ಕಳೆದ ಶುಕ್ರವಾರದಿಂದ ಸಂಜೆ ವೇಳೆಯಲ್ಲಿ ಮಿಡತೆಗಳು ಹಿಂಡು ಬೀಡುಬಿಟ್ಟು ಎಲೆಗಳನ್ನು ತಿನ್ನುತ್ತಿದ್ದವು. ಈ ಬಗ್ಗೆ ಮಾಧ್ಯಮ ವರದಿ ಬಿತ್ತರವಾದ ಬೆನ್ನಲ್ಲೇ ಕಡಬ ತಾಲೂಕು ಕೃಷಿ ಅಧಿಕಾರಿ ತಿಮ್ಮಪ್ಪಗೌಡ ಮಿಡತೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಿಡತೆ ಹಾಗೂ ಅದು ತಿಂದ ವಿವಿಧ ಬಗೆಯ ಗಿಡದ ಸೊಪ್ಪುಗಳನ್ನು ಸಂಗ್ರಹಿಸಿ ಸಂಶೋಧನೆಗಾಗಿ ರವಾನಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದರ ಸಂತತಿ ಹೆಚ್ಚಾಗುವ ಭೀತಿ ಎದುರಾಗಿದ್ದು, ಇವು ಬಹಳ ಕಹಿ ಇರುವ ಕಾಸರಕ ಎಲೆಯಿಂದ ಹಿಡಿದು ಸಾಮಾನ್ಯ ಎಲ್ಲಾ ಎಲೆಗಳನ್ನು ತಿನ್ನುತ್ತವೆ. ಅಲ್ಲದೆ ಮುಂದಕ್ಕೆ ರೈತ ಬೆಳೆದ ಅಡಿಕೆ, ತೆಂಗು ಮೊದಲಾದ ಕೃಷಿಯ ಎಲೆಯನ್ನು ಆಹಾರವಾಗಿ ಸೇವಿಸಿದರೆ ಬೆಳೆಗಳು ನಾಶವಾಗಲಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಸಿಲಿಗೆ ಕಾಡಿನಲ್ಲಿ ತರೆಗೆಲೆಯ ಮಧ್ಯೆ ಮರೆಯಾಗಿ, ವಾತಾವರಣ ತಂಪಾದ ಸಮಯದಲ್ಲಿ ಎಲೆಗಳ ಮೇಲೆ ಕುಳಿತು ಎಲೆಗಳನ್ನು ಆಹಾರವನ್ನಾಗಿಕೊಳ್ಳುತ್ತವೆ. ಸಧ್ಯ ಮಿಡತೆ ಕಾಣಿಸಿಕೊಂಡ ಹೇರ ಪ್ರದೇಶವು ಕೋಣಾಜೆ ಕಾಡಂಚಿನ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಬಹುಬೇಗನೆ ಮಿಡತೆಗಳು ಆಗಮಿಸುತ್ತವೆ ಎನ್ನುವ ಬಗ್ಗೆ ಕೃಷಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿ, ಕಂಡುಬಂದ ಮಿಡತೆಗಳ ಹಿಂಡು ಪ್ರಸ್ತುತ ಪ್ರಚಲಿತದಲ್ಲಿರುವ ಮರುಭೂಮಿ ಮಿಡತೆ ಜಾತಿಯದ್ದಲ್ಲ. ಕೃಷಿ ತಜ್ಞರ ಪ್ರಕಾರ ಈ ಮಿಡತೆ ಸ್ಟೋಟೆಡ್ ಕಾಫಿ ಗ್ರಾಸೋಪರ್ ಜಾತಿಯದ್ದಾಗಿದೆ. ಈ ಬಗ್ಗೆ ರೈತರು ಆತಂಕ ಪಡಬೇಡಬೇಕಿಲ್ಲ. ಇದನ್ನು ಸಂಹಾರ ಮಾಡಲು ಸಾಧ್ಯವಿದೆ, ಮಿಡತೆ ಹಾವಳಿ ಕಂಡು ಬಂದಲ್ಲಿ ತಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಬ ತಾಲೂಕಿನಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಈ ಜಾತಿಯ ಮಿಡತೆಗಳು ನಿನ್ನೆ ಹೇರಳವಾಗಿ ಕಂಡುಬಂದಿದ್ದವು. ಈ ಪ್ರದೇಶಗಳಿಗೂ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಮಿಡತೆಗಳ ಮಾದರಿಯನ್ನು ಸಂಗ್ರಹಿಸಿ ವಿಜ್ಞಾನಿಗಳಿಗೆ ರವಾನಿಸಿದ್ದಾರೆ.