ಮಂಗಳೂರು: ನಗರಕ್ಕೆ ಆಗಮಿಸಿದ್ದ ಸ್ಯಾಂಡಲ್ ವುಡ್ ಬೆಡಗಿ ರಚಿತಾ ರಾಮ್ ಅವರೊಂದಿಗೆ ಇಂದು ಪೊಲೀಸರು ಸೆಲ್ಫಿ ತೆಗೆದು ಸಂಭ್ರಮ ಪಟ್ಟರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರ ಆಹ್ವಾನದ ಮೇರೆಗೆ ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ರಚಿತಾರಾಮ್, ಮಂಗಳೂರಿನಿಂದ ನಾನು ಇಂದು ಹೊರಡುವವಳಿದ್ದೆ. ಅಷ್ಟರಲ್ಲಾಗಲೇ ಪೊಲೀಸ್ ಕಮಿಷನರ್ ಕರೆ ಬಂದಿತು. ಹಾಗಾಗಿ ಮನೆಯ ವಸ್ತ್ರದಲ್ಲಿಯೇ ಬಂದಿದ್ದೆ ಎಂದು ಹೇಳಿದರು. ಆಗ ಪೊಲೀಸ್ ಕಮಿಷನರ್ ನೀವು ಹೇಗೆ ಬಂದರೂ ಚೆಂದ ಎಂದಾಗ ರಚಿತಾ ರಾಮ್ ನಾಚಿ ನೀರಾದರು.
ಸಣ್ಣವಳಿದ್ದಾಗ ನನಗೆ ಐಪಿಎಸ್ ಆಗಬೇಕು, ಲಾಯರ್ ಆಗಬೇಕೆಂದು ಕನಸಿತ್ತು. ಆದರೆ, ಅದು ಆಗಲು ಸಾಧ್ಯವಾಗಿಲ್ಲ. ನಟಿಯಾದ ಬಳಿಕ ಹಲವಾರು ಪಾತ್ರಗಳನ್ನು ಮಾಡಿದೆ. ಲಾಯರ್ ಕೂಡಾ ಆದೆ. ಆದರೆ ಪೊಲೀಸ್ ಪಾತ್ರ ಇನ್ನೂ ಮಾಡಲು ಸಾಧ್ಯವಾಗಿಲ್ಲ ಎಂದರು. ಆಗ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು, ನೀವು ರಚಿತರಾಮ್ ಐಪಿಎಸ್ ' ಸಿನಿಮಾದಲ್ಲೇ ಅಭಿನಯಿಸಬೇಕು ಎಂದಾಗ ಗುಳಿಕೆನ್ನೆ ಬೆಡಗಿ ನಕ್ಕರು.
ಎರಡು ವರ್ಷಗಳ ಕೋವಿಡ್ ಕಾಲದಲ್ಲಿ ಪೊಲೀಸರು ಮಾಡಿರುವ ಕಾರ್ಯಕ್ಕೆ ಹ್ಯಾಟ್ಸ್ಅಪ್ ಎಂದ ಅವರು, ಡಿಸೆಂಬರ್ 31 ರಂದು ರಿಲೀಸ್ ಆಗುವ ಹೊಸ ಸಿನಿಮಾ 'ಲವ್ ಯೂ ರಚ್ಚು' ಅನ್ನು ಎಲ್ಲರೂ ನೋಡಿ ಎಂದು ಹೇಳಿದರು.