ಮಂಗಳೂರು: ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯೋರ್ವರಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯೇ ಆಕೆಯ ಚಿನ್ನಾಭರಣ ಎಗರಿಸಿದ್ದು ಪೊಲೀಸರು ಚಿನ್ನಾಭರಣ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಫಿಲೋಮಿನಾ ಸಲ್ದಾನ (72) ಎಂಬ ವೃದ್ಧೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಈ ವೃದ್ಧೆಗೆ ಶಕ್ತಿನಗರ ನಿವಾಸಿ ರಿಕ್ಷಾ ಚಾಲಕ ಪ್ರವೀಣ್ (40) ಎಂಬಾತ ಸಹಾಯ ಮಾಡುತ್ತಿದ್ದ. ಆದರೆ ಇದೇ ವ್ಯಕ್ತಿ 2020ರ ಜೂ. 7ರಂದು ಫಿಲೋಮಿನಾ ಸಲ್ದಾನ ಅವರ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಫಿಲೋಮಿನಾ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡಿದ್ದ ಉರ್ವ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಹಾಗೂ ನಗರದ ಫಳ್ನೀರ್ ಬಳಿಯ ಬ್ಯಾಂಕ್ನಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣಗಳ ಮೌಲ್ಯ 4,32,000 ರೂ. ಎಂದು ಅಂದಾಜಿಸಲಾಗಿದೆ.
ಉರ್ವ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್, ಪಿಎಸ್ಐ ಶ್ರೀಕಲಾ, ಎಎಸ್ಐ ಬಾಲಕೃಷ್ಣ ಹಾಗೂ ಸಿಬ್ಬಂದಿ ಪ್ರಕಾಶ, ಬಸವರಾಜ ಬಿರಾದಾರ ತನಿಖಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.